ಉಡುಪಿಯಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ವಿಶ್ವ ಸಂತರ ಸಮ್ಮೇಳನದಲ್ಲಿ, ಆಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡುವ ಬಗ್ಗೆ ಈಗಲೇ ಯಾವುದೇ ನಿರ್ಣಯ ಆಗಿಲ್ಲ. ಸಂಸದ ಸಾಕ್ಷೀ ಮಹಾರಾಜ್ ಅವರೊಬ್ಬರೇ ಆ ನಿರ್ಣಯ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಉಡುಪಿ (ಜೂ.27): ಉಡುಪಿಯಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ವಿಶ್ವ ಸಂತರ ಸಮ್ಮೇಳನದಲ್ಲಿ, ಆಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡುವ ಬಗ್ಗೆ ಈಗಲೇ ಯಾವುದೇ ನಿರ್ಣಯ ಆಗಿಲ್ಲ. ಸಂಸದ ಸಾಕ್ಷೀ ಮಹಾರಾಜ್ ಅವರೊಬ್ಬರೇ ಆ ನಿರ್ಣಯ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸಾಕ್ಷೀ ಮಹಾರಾಜ್ ಅವರು ಉತ್ತರ ಪ್ರದೇಶದಲ್ಲಿ ಉಡುಪಿಯಲ್ಲಿ ನಡೆಯುವ ಸಂತರ ಸಮ್ಮೇಳನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ನೀಡಿದ ಹೇಳಿಕೆಗೆ ಸಂಬಂಧಿಸಿ ಪೇಜಾವರ ಶ್ರೀಗಳು ಈ ಪ್ರತಿಕ್ರಿಯೆ ನೀಡಿದ್ದಾರೆ. ಸಾಕ್ಷಿ ಮಹಾರಾಜ್ ಇತ್ತೀಚೆಗೆ ಉಡುಪಿಗೆ ಆಗಮಿಸಿ ಮಾತುಕತೆ ನಡೆಸಿದ್ದರು. ಈ ವೇಳೆ ರಾಮಮಂದಿರದ ನಿರ್ಮಾಣ ಬಗ್ಗೆ ಅವರು ಮಾತನಾಡಿದ್ದು ಹೌದು. ಆದರೆ ಹಿಂದಿಯಲ್ಲಿ ಮಾತನಾಡಿದ್ದರಿಂದ ನನಗೆ ಸ್ಪಷ್ಟವಾಗಿ ಅರ್ಥ ಆಗಲಿಲ್ಲ ಎಂದು ಶ್ರೀಗಳು ತಿಳಿಸಿದರು.
‘ಈ ಬಾರಿಯ ಸಂತ ಸಮ್ಮೇಳನದಲ್ಲಿ ರಾಮಮಂದಿರಕ್ಕೆ ಮಹೂರ್ತ ಮಾಡುವ ಬಗ್ಗೆ ಈಗಲೇ ನಿರ್ಣಯ ತೆಗೆದುಕೊಳ್ಳಲಾಗುವುದಿಲ್ಲ, ಈ ಬಗ್ಗೆ ಸಾಕ್ಷೀ ಮಹಾರಾಜ್ ಅವರೊಬ್ಬರೇ ನಿರ್ಣಯ ತೆಗೆದುಕೊಳ್ಳುವುದಕ್ಕಾಗುವುದಿಲ್ಲ. ರಾಮಮಂದಿರ ನಿರ್ಮಾಣಕ್ಕೆ ಸಮಿತಿ ಇದೆ, ಅಲ್ಲಿ ಮೊದಲು ನಿರ್ಣಯ ಆಗಬೇಕು. ಸಂವಿಧಾನ, ಕಾನೂನು, ರಾಜ್ಯಸಭೆ, ಲೋಕಸಭೆಯಲ್ಲಿ ತೀರ್ಮಾನ ಆಗಬೇಕು, ಅದ್ಯಾವುದೂ ನಡೆಯದೇ ನಾನು ಏನನ್ನೂ ಹೇಳಲಾರೆ’ ಎಂದು ಪೇಜಾವರ ಶ್ರೀಗಳು ಸ್ಪಷ್ಟನೆ ನೀಡಿದರು.
ನಮ್ಮ ಮೂರನೇ ಪರ್ಯಾಯದಲ್ಲಿ ಉಡುಪಿಯಲ್ಲಿ ಧಾರ್ಮಿಕ ಸಂಸತ್ತು ಆಗಿತ್ತು. ಆಗ ರಾಮಮಂದಿರದ ಬಗ್ಗೆ ಚರ್ಚೆ ಆಗಿತ್ತು. ಮಂದಿರ ಪ್ರವೇಶಕ್ಕೆ ಸರ್ಕಾರ ಅವಕಾಶ ನೀಡದಿದ್ದರೆ, ಅದರ ಬೀಗವನ್ನು ಒಡೆದು ಒಳಗೆ ಪ್ರವೇಶಿಸುವ ನಿರ್ಧಾರ ಮಾಡಲಾಗಿತ್ತು. ಆದರೆ ಅಂತಹ ಅಗತ್ಯವೇ ಬರಲಿಲ್ಲ. ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರೇ ಮಂದಿರದ ಬೀಗ ತೆಗೆಸಿದ್ದರು ಎಂದು ಪೇಜಾವರ ಶ್ರೀಗಳು ಹೇಳಿದರು.
