ಪ್ರಧಾನಿ ಕಾಪ್ಟರ್ ತಪಾಸಣೆ ಮಾಡಲು ಆಗಲ್ಲ: ಚಿತ್ರದುರ್ಗ ಡೀಸಿ, ಎಸ್ಪಿ
ಪ್ರಧಾನಿ ಕಾಪ್ಟರ್ ತಪಾಸಣೆ ಮಾಡಲು ಆಗಲ್ಲ| ನಿಯಮದ ಪ್ರಕಾರ ತಪಾಸಣೆಯಿಂದ ವಿನಾಯ್ತಿ| ಟ್ರಂಕ್‌ನಲ್ಲಿದ್ದದ್ದು ಭದ್ರತೆಗೆ ಸಂಬಂಧಿಸಿದ ಉಪಕರಣ: ಚಿತ್ರದುರ್ಗ ಡೀಸಿ, ಎಸ್ಪಿ
ಚಿತ್ರದುರ್ಗ[ಏ.16]: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆಂದು ಏಪ್ರಿಲ್ 9 ರಂದು ಚಿತ್ರದುರ್ಗಕ್ಕೆ ಆಗಮಿಸಿದಾಗ ಅವರ ಹೆಲಿಕಾಪ್ಟರ್ ನಿಂದ ಇಳಿಸಲಾದ ಟ್ರಂಕ್‌ನಲ್ಲಿ ಭದ್ರತೆ ಸಂಬಂಧಿಸಿದ ಉಪಕರಣಗಳಿದ್ದವು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯ ಹಾಗೂ ಎಸ್ಪಿ ಡಾ.ಅರುಣ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಪ್ರಧಾನಮಂತ್ರಿಗಳಂತಹ ಅತಿಗಣ್ಯ ವ್ಯಕ್ತಿಗಳು ಎಸ್‌ಪಿಜಿ ಭದ್ರತೆಯ ವ್ಯಾಪ್ತಿಯಲ್ಲಿ ಇರುತ್ತಾರೆ. ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಭಯೋತ್ಪಾದಕರಿಂದ ತೀವ್ರ ಜೀವ ಬೆದರಿಕೆ ಎದುರಿಸುತ್ತಿರುವ, ಪ್ರಧಾನಮಂತ್ರಿ ಸೇರಿದಂತೆ ಅತಿ ಭದ್ರತೆಯ ವ್ಯಾಪ್ತಿಗೆ ಬರುವ ರಾಜಕೀಯ ನಾಯಕರ ಹೆಲಿಕಾಪ್ಟರ್ ಹಾಗೂ ವಿಮಾನಗಳಿಗೆ ತಪಾಸಣೆಯಿಂದ ವಿನಾಯಿತಿ ನೀಡಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿಯವರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾರ್ಗಸೂಚಿಯನ್ವಯವೇ ಎಸ್‌ಪಿಜಿ ಭದ್ರತೆ ವ್ಯಾಪ್ತಿಯಲ್ಲಿದ್ದ ಹೆಲಿಕಾಪ್ಟರ್ ತಪಾಸಣೆಯಿಂದ ವಿನಾಯಿತಿ ನೀಡಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಪಾಲಿಸಲಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ಎಲ್ಲ ರಾಜಕೀಯ ನಾಯಕರ ಹೆಲಿಕಾಪ್ಟರ್ ಹಾಗೂ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಹೀಗಾಗಿ ಯಾವುದೇ ನಿಯಮಗಳ ಉಲ್ಲಂಘನೆ ಜಿಲ್ಲೆಯಲ್ಲಿ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್ ಮಾತನಾಡಿ, ಪ್ರಧಾನಮಂತ್ರಿಗಳ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಎಸ್‌ಪಿಜಿ ಭದ್ರತಾ ತಂಡದವರು ಹೆಲಿಕಾಪ್ಟರ್‌ನಿಂದ ಕೆಳಗಿಳಿಸಿದ ಟ್ರಂಕ್‌ನಲ್ಲಿ ಭದ್ರತೆಗೆ ಸಂಬಂಧಿತ ಉಪಕರಣಗಳಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಉಳಿದಂತೆ ಎಲ್ಲ ವಾಹನಗಳ ತಪಾಸಣೆಯನ್ನೂ ಎಫ್‌ಎಸ್‌ಟಿ ತಂಡ ನಿಯಮಾನುಸಾರ ಕೈಗೊಂಡಿದೆ. ಹೀಗಾಗಿ ಯಾವುದೇ ವದಂತಿಗಳನ್ನು ನಂಬುವ ಅಗತ್ಯವಿಲ್ಲ ಎಂದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.