ಬೆಂಗಳೂರು (ಸೆ.27): ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್’ನ ತೀರ್ಪಿನ ಬಳಿಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವರಿಷ್ಠ ಯಡಿಯೂರಪ್ಪ, ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡರೂ ಬಿಜೆಪಿಯು ಸರ್ಕಾರದ ಜೊತೆ ಇರುವುದಾಗಿ ಹೇಳಿದ್ದಾರೆ.

ಮೂರು ದಿನ ಆರು ಸಾವಿರ ಕ್ಯುಸೆಕ್ ನೀರು ಬಿಡುವಂತೆ ಸುಪ್ರೀಂ ನೀಡಿರುವ ಆದೇಶ ದುರಾದೃಷ್ಟಕರ ಎಂದು ಅವರು ಅಭಿಪ್ರಾಯ ವ್ಯಕ್ಪಡಿಸಿದ್ದಾರೆ.

ರಾಜ್ಯ ಪರ ವಕೀಲ ಫಾಲಿ ನಾರಿಮನ್ ಗಟ್ಟಿ ಧ್ವನಿಯಲ್ಲಿ ವಾದ ಮಾಡಿದ್ದಾರೆ, ಆದರೆ ಸುಪ್ರೀಂಕೋರ್ಟ್ ನಮ್ಮ ಕಷ್ಟಕ್ಕೆ ಬೆಲೆ ಕೊಟ್ಟಿಲ್ಲ ಎಂದು ಅವರು ಹೇಳಿದ್ದಾರೆ.

ಈಗ ಮತ್ತೆ ಅಧಿವೇಶನ ಕರೆಯಲು ನಾವು ಒತ್ತಾಯ ಮಾಡುವುದಿಲ್ಲ, ಹಾಗೂ ಇನ್ನೊಂದು ಅಧಿವೇಶನ ಕರೆಯಲು ಸಾಧ್ಯವೂ ಇಲ್ಲ. ಪ್ರಧಾನಿ ಮಧ್ಯಸ್ಥಿಕೆಗೆ ಅವಕಾಶ ಇದೆ ಎಂದಾದರೆ ನಾವು ಅದಕ್ಕಾಗಿ ಪ್ರಯತ್ನ ಪಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.