ಇಸ್ಲಾಮಾಬಾದ್‌ (ನ. 30): ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆಗೆ ತಾವು ಸಿದ್ಧ ಎಂದು ಪಾಕಿಸ್ತಾನದ ಮುಖ್ಯಮಂತ್ರಿ ಇಮ್ರಾನ್‌ ಖಾನ್‌ ಪುನರುಚ್ಚರಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶ ಕಲ್ಪಿಸುವುದು ನಮ್ಮ ದೇಶದ ಹಿತದೃಷ್ಟಿಯಿಂದಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.

ಕರ್ತಾರ್‌ಪುರ ಕಾರಿಡಾರ್‌ಗೆ ಅಡಿಗಲ್ಲು ಹಾಕಿದ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಭಾರತೀಯ ಪತ್ರಕರ್ತರ ಜತೆ ಗುರುವಾರ ಮಾತನಾಡಿದ ಇಮ್ರಾನ್‌ ಅವರು, ‘ಪಾಕಿಸ್ತಾನವು ಒಂದು ಕಡೆ ಉಗ್ರವಾದಕ್ಕೆ ಪ್ರಚೋದಿಸುತ್ತಿದೆ. ಇನ್ನೊಂದು ಕಡೆ ಶಾಂತಿ ಮಾತುಕತೆಗೆ ಯತ್ನಿಸುತ್ತಿದೆ. ಶಾಂತಿ ಮಾತುಕತೆ ಮತ್ತು ಉಗ್ರವಾದ ಎರಡೂ ಒಟ್ಟೊಟ್ಟಿಗೆ ಸಾಗದು’ ಎಂಬ ಭಾರತದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

‘ಪಾಕಿಸ್ತಾನದ ನೆಲವನ್ನು ಉಗ್ರವಾದಕ್ಕೆ ಅವಕಾಶ ನೀಡುವುದು ನಮ್ಮ ಹಿತದೃಷ್ಟಿಯಿಂದಲ್ಲ. ಪಾಕಿಸ್ತಾನ ಶಾಂತಿ ಬಯಸುತ್ತದೆ. ಇದಕ್ಕಾಗಿ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆಗೆ ಸಿದ್ಧನಿದ್ದೇನೆ. ಪಾಕಿಸ್ತಾನದ ಜನರ ಮನಃಸ್ಥಿತಿ ಬದಲಾಗಿದೆ’ ಎಂದರು.

‘ನಿಮ್ಮ ಅವಧಿಯಲ್ಲಿ ಕಾಶ್ಮೀರ ಸಮಸ್ಯೆ ಬಗೆಹರಿಯುತ್ತಾ?’ ಎಂಬ ಪ್ರಶ್ನೆಗೆ ‘ಯಾವುದೂ ಅಸಾಧ್ಯವಲ್ಲ. ನಾನು ಯಾರ ಜತೆಗೆ ಬೇಕಾದರೂ ಮಾತುಕತೆಗೆ ಸಿದ್ಧ. ಆದರೆ ಕಾಶ್ಮೀರ ಸಮಸ್ಯೆಗೆ ಸೇನಾ ಕಾರಾರ‍ಯಚರಣೆ (ಯುದ್ಧ) ಪರಿಹಾರವಲ್ಲ’ ಎಂದು ಸ್ಪಷ್ಟಪಡಿಸಿದರು.

‘ಹಾಗಂತ ಶಾಂತಿಯ ಇರಾದೆ ಕೇವಲ ಒಂದು ಕಡೆಯಿಂದ ಬಂದರೆ ಆಗದು. ಭಾರತದ ಮಹಾ ಚುನಾವಣೆಗಳು ಮುಗಿಯಲಿ. ಅಲ್ಲಿಯವರೆಗೆ ನಾವು ಶಾಂತಿ ಮಾತುಕತೆಗೆ ಕಾಯಲು ಸಿದ್ಧರಿದ್ದೇವೆ’ ಎಂದರು.

ಇದೇ ವೇಳೆ, ಕರ್ತಾರ್‌ಪುರ ಕಾರಿಡಾರನ್ನು ಭಾರತೀಯರು ಸ್ವಾಗತಿಸುತ್ತಾರೆ ಎಂಬ ನಂಬಿಕೆ ತಮ್ಮದೆಂದು ಇಮ್ರಾನ್‌ ನುಡಿದರು.