ರಾಜ್ಯದಲ್ಲಿ ಉಪ ಚುನಾವಣೆಯ ಕಣಗಳು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ರಂಗೇರುತ್ತಿದ್ದು ಈ ನಿಟ್ಟಿನಲ್ಲಿ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ. ಇದೀಗ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ. 

ಹೂವಿನಹಡಗಲಿ : ಕಾಂಗ್ರೆಸ್‌ ಆರೋಪಿಸುವಂತೆ ನಾನಾಗಲಿ, ಶಾಸಕ ಶ್ರೀರಾಮುಲು ಆಗಲಿ ಹೆಬ್ಬೆಟ್ಟಲ್ಲ (ಅವಿದ್ಯಾವಂತರಲ್ಲ). ಇಬ್ಬರೂ ಶಿಕ್ಷಣ ಪಡೆದಿದ್ದೇವೆ. ವಿದ್ಯಾವಂತರಾಗಿದ್ದೇವೆ. ಕಾಂಗ್ರೆಸ್‌ ಮುಖಂಡರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವ ರೀತಿಯಲ್ಲಿ ಕನ್ನಡ ಭಾಷೆ ಮಾತನಾಡುತ್ತೇವೆ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ತಿರುಗೇಟು ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಮನೆಯಲ್ಲಿ ನಮಗೆ ಸಂಸ್ಕಾರ ನೀಡಿದ್ದಾರೆ. ಬಳ್ಳಾರಿಯಲ್ಲೇ ಇದ್ದು ಈ ನೆಲದ ಮಗಳಾಗಿದ್ದೇನೆ. ನಮ್ಮ ಬಗ್ಗೆ ಆರೋಪ ಮಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಸೋಲಿನ ಭಯದಿಂದ ಅವರು ಹತಾಶರಾಗಿದ್ದಾರೆ ಎಂದು ಹೇಳಿದರು. ರಾಮುಲುಗೆ ಕನ್ನಡವೇ ಗೊತ್ತಿಲ್ಲ ಎಂದು ಕಾಂಗ್ರೆಸ್ಸಿಗರು ಇತ್ತೀಚೆಗೆ ಟೀಕಿಸಿದ್ದರು. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ, ಕೈ ಮುಖಂಡರ ಆರೋಪಗಳಿಗೆ ತಿರುಗೇಟು ನೀಡಿದರು.

ಪಟ್ಟಣದಲ್ಲಿ ಸೋಮವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಈ ವರೆಗೂ ಯಾವ ಪಕ್ಷದ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಸಚಿವ ಡಿ.ಕೆ.ಶಿವಕುಮಾರ ರೀತಿಯಲ್ಲಿ ಶ್ರೀರಾಮುಲು ಅಣ್ಣ ಎಂಬ ಇತ್ಯಾದಿ ಶಬ್ದಗಳಿಂದ ಹಂಗಿಸುವ ಗೋಜಿಗೆ ಹೋಗಿಲ್ಲ. ಬಳ್ಳಾರಿ ಜನ ನೇರವಾಗಿ ಮಾತನಾಡುತ್ತೇವೆಂದು ಹೇಳಿದರು.

ಕಾಂಗ್ರೆಸ್‌ ಅಡ್ಡಗಾಲು

2009ರಲ್ಲಿ ರಾಜ್ಯದಿಂದ ಏಕೈಕ ಸಂಸದೆಯಾಗಿದ್ದ ನನಗೆ ಕಾಂಗ್ರೆಸ್‌ ನಿನ್ನ ಕುಲಕಸುಬು ಏನು? ಎಂದು ಪ್ರಶ್ನಿಸಿ ಜಾತಿನಿಂದನೆ ಮಾಡಿದ್ದರು. ಅಲ್ಲದೆ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದರು ಎಂದು ಆರೋಪಿಸಿದರು.

ಸಂಸದೆಯಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಮೂಲಕ ಒಂದೂವರೆ ವರ್ಷ ಸಂಸತ್ತಿನಿಂದ ಹೊರಗಿಟ್ಟು, ನನಗೆ ಸಾಕಷ್ಟುಮಾನಸಿಕ ಕಿರುಕುಳ ನೀಡಲಾಗಿತ್ತು. ಜತೆಗೆ ಬಂದ ಅನುದಾನವನ್ನು ಬಳಕೆ ಮಾಡಲು ಕಾಂಗ್ರೆಸ್ಸಿಗರು ಬಿಡಲಿಲ್ಲ. ಇದೀಗ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.