ಬೆಂಗಳೂರು :  ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿರುವ ರಾಜ್ಯ ಸರ್ಕಾರವು ನೀರು ಶುದ್ಧೀಕರಣ ಘಟಕಗಳ ಸಮರ್ಪಕ ನಿರ್ವಹಣೆಗಾಗಿ ಮಾರ್ಗಸೂಚಿ ರೂಪಿಸಿ ಪ್ರತಿ ತಾಲೂಕಿಗೆ ಒಂದರಂತೆ ನಿರ್ವಹಣಾ ಪ್ಯಾಕೇಜ್‌ ಅನ್ನು ಅರ್ಹ ಸಂಸ್ಥೆಗಳಿಗೆ ವಹಿಸಲು ನಿರ್ಧರಿಸಿದೆ.

ಪ್ರಸ್ತುತ ಪ್ರತಿ ಲೀಟರ್‌ಗೆ 10 ಪೈಸೆ ದರದಂತೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಆದರೆ, ನಿರ್ವಹಣಾ ವೆಚ್ಚ 35 ಪೈಸೆ ಆಗಿದೆ. ಇದನ್ನು ಸರಿದೂಗಿಸಲು ಕಾಲಕಾಲಕ್ಕೆ ಪ್ರತಿ ಲೀಟರ್‌ಗೆ 25 ಪೈಸೆ ಏರಿಕೆ ಮಾಡುವ ಬಗ್ಗೆಯೂ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಅಲ್ಲದೇ, ಗ್ರಾಮೀಣ ಭಾಗದಲ್ಲಿ ಜನ ವಸತಿಗಳಲ್ಲಿ ಅನುಷ್ಠಾನಗೊಳಿಸಿರುವ ನೀರು ಶುದ್ಧೀಕರಣ ಘಟಕಗಳ ಪೈಕಿ ನಾಣ್ಯ ಬೂತ್‌ ಇರುವ ಕಡೆ ನಾನಾ ರೀತಿಯ ತಾಂತ್ರಿಕ ದೋಷಗಳು ಕಂಡು ಬರುತ್ತಿವೆ. ಹೀಗಾಗಿ ನಾಣ್ಯಗಳ ಬೂತ್‌ಗಳ ಬದಲಾಗಿ ಸ್ಮಾರ್ಟ್‌ಕಾರ್ಡ್‌ ಬೂತ್‌ಗಳನ್ನು ಅಳವಡಿಸಲು ಸಚಿವ ಸಂಪುಟ ಅನುಮೋದನೆ ಕೊಟ್ಟಿದೆ.

ನೀರು ಶುದ್ಧೀಕರಣ ಘಟಕಗಳನ್ನು ಒಮ್ಮೆ ರಿಪೇರಿ ಮಾಡುವುದು ಸೇರಿದಂತೆ ಐದು ವರ್ಷಗಳ ಕಾಲ ನಿರ್ವಹಣೆಗಾಗಿ 233 ಕೋಟಿ ರು. ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಗ್ರಾಮ ಪಂಚಾಯತ್‌ಗಳೇ ಸಮರ್ಪಕವಾಗಿ ನಿರ್ವಹಣೆ ಮಾಡಲು ನಿರ್ಧರಿಸಿದರೆ ಅದಕ್ಕೂ ಅವಕಾಶವಿದ್ದು, ಯಾವುದೇ ಸಂಸ್ಥೆಗಳಿಗೆ ವಹಿಸುವುದಿಲ್ಲ ಎಂದು ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಅಲ್ಲದೇ ನಾಣ್ಯದ  ಸ್ಮಾರ್ಟ್‌ಕಾರ್ಡ್‌ ಬೂತ್‌ ಅಳವಡಿಕೆಗೆ ಸಂಪುಟ ನಿರ್ಧಾರ ಮಾಡಿದೆ.

18,582 ನೀರು ಶುದ್ಧೀಕರಣ ಘಟಕ:

ಗ್ರಾಮೀಣ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಒಟ್ಟು 18,582 ನೀರು ಶುದ್ಧೀಕರಣ ಘಟಕಗಳ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ 16 ಸಾವಿರ ಕುಡಿಯುವ ನೀರು ಘಟಕಗಳ ನಿರ್ವಹಣಾ ಅವಧಿ ಮುಗಿದಿದೆ. ಇವುಗಳ ಸಮರ್ಪಕ ನಿರ್ವಹಣೆಗಾಗಿ ಪ್ರತಿ ತಾಲೂಕಿಗೆ ಒಂದರಂತೆ ನಿರ್ವಹಣಾ ಪ್ಯಾಕೇಜ್‌ ಅನ್ನು ಟೆಂಡರ್‌ ಮೂಲಕ ಅರ್ಹ ಸಂಸ್ಥೆಗಳಿಗೆ ಒದಗಿಸಲು ಗ್ರಾಮ ಪಂಚಾಯತ್‌ಗೆ ಅಧಿಕಾರ ನೀಡಲು ನಿರ್ಧರಿಸಲಾಗಿದೆ. ಒಂದು ವೇಳೆ ಗ್ರಾಮ ಪಂಚಾಯತ್‌ಗಳೇ ನಿರ್ವಹಣೆ ಮಾಡಲು ತೀರ್ಮಾನಿಸಿದರೆ ಅವಕ್ಕೂ ಅವಕಾಶ ನೀಡಲಾಗುತ್ತದೆ. ಒಂದು ತಾಲೂಕಿನಲ್ಲಿ 100ಕ್ಕಿಂತ ಹೆಚ್ಚು ಘಟಕಗಳಿದ್ದಲ್ಲಿ ಹೆಚ್ಚುವರಿ ಪ್ಯಾಕೇಜ್‌ ಸಹ ನೀಡಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿಗೆ ನಿರ್ವಹಣೆಯ ಹೊಣೆಯನ್ನು ಹಸ್ತಾಂತರಿಸಿದ ಬಳಿಕ ಬಹಳ ಕಡೆಗಳಲ್ಲಿ ಸರಿಯಾಗಿ ನಿರ್ವಹಣೆ ಮಾಡದೆ ಯಂತ್ರ ಕೆಟ್ಟು ಹೋಗಿವೆ. ನಿರ್ವಹಣೆ ಮಾಡುವ ಕುರಿತು ಸರಿಯಾದ ಮಾರ್ಗಸೂಚಿ ಇಲ್ಲದ ಕಾರಣ 7-8 ತಿಂಗಳ ಕಾಲ ಅಧ್ಯಯನ ನಡೆಸಿ ಮಾರ್ಗಸೂಚಿ ರೂಪಿಸಿ, ಅದನ್ನು ಕಾರ್ಯರೂಪಕ್ಕೆ ತರಲಾಗುವುದು. ತಾಲೂಕು ಕೇಂದ್ರಗಳಲ್ಲಿ ಏಜೆನ್ಸಿಗಳಿಗೆ ಟೆಂಡರ್‌ ಮೂಲಕ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಗುವುದು. ಶುದ್ಧ ನೀರಿನ ಘಟಕ ಕೆಟ್ಟು ಹೋದರೆ ಇಂತಿಷ್ಟುದಿನದಲ್ಲಿ ರಿಪೇರಿ ಮಾಡಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ರಿಪೇರಿ ಮಾಡದಿದ್ದರೆ ದಂಡ ವಿಧಿಸಲಾಗುವುದು ಎಂದು ವಿವರಿಸಿದರು.