ಕಾರವಾರ[ಮೇ.21]: ಘಟ್ಟದ ಮೇಲ್ಭಾಗದಲ್ಲಿ ಬೇಡ್ತಿ ಎಂದೆ ಪರಿಚಿತವಾಗಿ ಘಟ್ಟದ ಕೆಳಭಾಗದಲ್ಲಿ ಗಂಗಾವಳಿ ಎಂದು ಕರೆಸಿಕೊಳ್ಳುವ ಜೀವನದಿ ಇದೇ ಮೊದಲ ಬಾರಿಗೆ ಹರಿವನ್ನು ನಿಲ್ಲಿಸಿ, ಬೆತ್ತಲಾಗಿದೆ. ಇದರಿಂದ ಕುಡಿಯುವ ನೀರು ಪೂರೈಕೆಗೆ ಈ ನದಿಯನ್ನೇ ಅವಲಂಬಿಸಿದ್ದ ಐಎನ್‌ಎಸ್‌ ಕದಂಬ ನೌಕಾನೆಲೆಯಲ್ಲೂ ಕುಡಿಯುವ ನೀರಿನ ತತ್ವಾರ ಉಂಟಾಗಿದೆ. ಇನ್ನೂ 10 ದಿನದಲ್ಲಿ ಮಳೆ ಬರದಿದ್ದರೇ ನೌಕಾನೆಲೆಗೆ ಕುಡಿಯುವ ಗುಟುಕು ನೀರೂ ಪೂರೈಕೆಯಾಗದು.

ನೌಕಾನೆಲೆಗೆ ಇದೇ ಮೊದಲ ಬಾರಿ ಕುಡಿಯುವ ನೀರಿನ ಬರ ತಟ್ಟಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ನೀರಿಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಗೋಕರ್ಣಕ್ಕೆ 30 ಎಂಎಲ್‌ಡಿ, ಕದಂಬ ನೌಕಾನೆಲೆಗೆ 20 ಎಂಎಲ್‌ಡಿ, ಕಾರವಾರಕ್ಕೆ 20-30 ಎಂಎಲ್‌ಡಿ ನೀರಿನ ಅಗತ್ಯ ಇದೆ. 1983ರಿಂದ ಈ ತನಕ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಇಲ್ಲಿದ್ದಾರೆ. ಇದೇ ಪ್ರಥಮ ಬಾರಿಗೆ ನದಿ ಹರಿವನ್ನು ನಿಲ್ಲಿಸಿದ್ದನ್ನು ಕಾಣುತ್ತಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಗಂಗಾವಳಿ ನದಿಯಲ್ಲಿ ಕನಿಷ್ಠ 1 ಮೀಟರ್‌ನಷ್ಟುಆಳ ನೀರು ಇದ್ದರೆ ಮಾತ್ರ ಪಂಪ್‌ನಿಂದ ನೀರೆತ್ತಬಹುದು. ಈಗ ಅಲ್ಲಲ್ಲಿ ಗುಂಡಿಗಳಲ್ಲಿ ಮಾತ್ರ ನೀರು ಇದೆ. ಅದೇ ನೀರನ್ನು ಆಗಾಗ ಪಂಪ್‌ ಮೂಲಕ ಎತ್ತಿ ಪೂರೈಸಲಾಗುತ್ತಿದೆ. 10 ದಿನಗಳಲ್ಲಿ ಮಳೆ ಬರದೆ ಇದ್ದರೆ ಗುಂಡಿಯಲ್ಲಿ ಇರುವ ನೀರು ಸಂಪೂರ್ಣ ಖಾಲಿಯಾಗಿ ಕಾರವಾರ, ಅಂಕೋಲಾ, ಗೋಕರ್ಣ, ನೌಕಾನೆಲೆ, ಗ್ರಾಸಿಮ್‌ ಇಂಡಸ್ಟ್ರಿಗೆ ಗುಟುಕು ನೀರೂ ಇಲ್ಲಿಂದ ಪೂರೈಕೆಯಾಗದು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.