ಬೆಂಗಳೂರು :  ಮಲೆನಾಡು, ಕರಾವಳಿ ಭಾಗದಲ್ಲಿ ಸುಮಾರು ಒಂದು ವಾರ ಅಬ್ಬರಿಸಿದ ಮುಂಗಾರು ಮಳೆ ಕ್ಷೀಣಿಸಿದೆ. ಭಾನುವಾರ ರಾಜ್ಯದ ಕೆಲವೆಡೆ ತುಂತುರು ಮಳೆಯಾಗಿರುವುದು ಬಿಟ್ಟರೆ, ಭಾರಿ ಮಳೆಯ ವರದಿಗಳು ಬಂದಿಲ್ಲ. ಈ ನಡುವೆ, ಕೊಡಗಿನಲ್ಲಿ ಸುರಿದ ಭರ್ಜರಿ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್‌) ಜಲಾಶಯದ ನೀರಿನ ಮಟ್ಟಶತಕದ ಗಡಿಗೆ ತಲುಪಿದೆ. ಸಾಮಾನ್ಯವಾಗಿ ಜುಲೈ ಮಧ್ಯಭಾಗದಿಂದ ಮೈದುಂಬಿಕೊಳ್ಳುತ್ತಿದ್ದ ಈ ಜಲಾಶಯ ಜೂನ್‌ 2ನೇ ವಾರದಲ್ಲೇ 100 ಅಡಿ ಹೊಸ್ತಿಲಿಗೆ ಬಂದಿರುವುದು ಎರಡು ದಶಕಗಳಲ್ಲಿ ಇದೇ ಮೊದಲು.

ಮೂರು ವರ್ಷಗಳಿಂದ ಈ ಜಲಾಶಯ ಭರ್ತಿಯಾಗಿಲ್ಲ. ಜೂನ್‌ 2ನೇ ವಾರದಲ್ಲೇ 100 ಅಡಿ ಬಳಿಗೆ ಬಂದಿರುವುದರಿಂದ ಈ ವರ್ಷ ಅಣೆಕಟ್ಟೆತುಂಬಬಹುದು ಎಂಬ ನಿರೀಕ್ಷೆ ಗರಿಗೆದರಿದೆ. ಇದರಿಂದ ನೀರಾವರಿಗೆ ಈ ಜಲಾಶಯವನ್ನೇ ಆಶ್ರಯಿಸಿರುವ ಮಂಡ್ಯ, ಮೈಸೂರು ಜಿಲ್ಲೆಯ ರೈತರು ಹಾಗೂ ಕುಡಿಯುವ ನೀರಿಗೆ ಅವಲಂಬಿತರಾಗಿರುವ ರಾಜಧಾನಿ ಬೆಂಗಳೂರು, ಮೈಸೂರು ಸುತ್ತಮುತ್ತಲಿನ ನಗರ- ಪಟ್ಟಣಗಳ ಜನರು ನಿಟ್ಟುಸಿರುಪಡುವಂತಾಗಿದೆ.

ಕ್ಷೀಣಿಸಿದ ಮಳೆ:  ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹುಬ್ಬಳ್ಳಿ, ಕಾರವಾರ, ಬೆಳಗಾವಿ ಸೇರಿದಂತೆ ವಿವಿಧೆಡೆ ಮಳೆ ಕ್ಷೀಣಿಸಿದೆ. ಇದರಿಂದ ಕೆಲ ಜಲಾಶಯಗಳಿಗೆ ಬರುತ್ತಿದ್ದ ಒಳಹರಿವು ಇಳಿಮುಖವಾಗಿದೆ. ಶನಿವಾರ ರಾಜ್ಯದ ಹೆಚ್ಚಿನ ಭಾಗದಲ್ಲಿ ಬಿಸಿಲಿನ ವಾತಾವರಣ ಕಂಡುಬಂತು. ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 24.59 ಮಿ.ಮೀ. ಮಳೆಯಾಗಿದೆ.

ಇನ್ನು ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದ ಕಪಿಲಾ ನದಿಯ ನೀರಿನ ಮಟ್ಟಮತ್ತಷ್ಟುಏರಿಕೆ ಕಂಡಿದೆ. ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಬಳಿಯ ಸ್ನಾನಘಟ್ಟ, ಪರಶುರಾಮ ದೇವಾಲಯ ಹಾಗೂ ಶ್ರೀ ಮಲ್ಲನಮೂಲೆಯ ಮಠದ ಪೀಠಾಧ್ಯಕ್ಷ ಚೆನ್ನಬಸವ ಸ್ವಾಮೀಜಿಗಳ ಗುರುವಂದನಾ ಕಾರ‍್ಯಕ್ರಮಕ್ಕಾಗಿ ಹಾಕಲಾಗಿದ್ದ ವೇದಿಕೆ ಜಲಾವೃತಗೊಂಡಿವೆ.

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಕವಲಕೇರಾ ಗ್ರಾಮದಲ್ಲಿ ಮನೆ ಗೋಡೆ ಮತ್ತು ಮಂಗಳೂರಿನಲ್ಲಿ ತಲಾ ಒಂದೊಂದು ಮನೆಗಳು ಕುಸಿದಿದ್ದು, ಕುಟುಂಬಸ್ಥರು ಪ್ರಾಣಾಪಾಯಿಂದ ಪಾರಾಗಿದ್ದಾರೆ.

ಕೆಆರ್‌ಎಸ್‌ ದಾಖಲೆ:  20 ವರ್ಷಗಳಿಂದ ಜೂನ್‌ 2ನೇ ವಾರದಲ್ಲೇ ಮೊದಲ ಬಾರಿಗೆ ಕೆಆರ್‌ಎಸ್‌ ಜಲಾಶಯಕ್ಕೆ 100ರ ಗಡಿಯ ಸನಿಹಕ್ಕೆ ಬಂದಿದೆ. ಗರಿಷ್ಠ ಮಟ್ಟ124.80 ಅಡಿ ಇರುವ ಕೆಆರ್‌ಎಸ್‌ ಶನಿವಾರ 99.60 ಅಡಿ ನೀರಿತ್ತು. ಭಾನುವಾರ ಬೆಳಗ್ಗೆ 6ರ ವೇಳೆಗೆ ಕೆಆರ್‌ಎಸ್‌ ಜಲಾಶಯ 100 ಅಡಿ ಗಡಿ ದಾಟಲಿದೆ. 4 ದಿನಗಳಲ್ಲಿ 10 ಅಡಿ ನೀರು ಜಲಾಶಯದಲ್ಲಿ ಏರಿಕೆ ಕಂಡು ಬಂದಿತ್ತು. ಜಲಾಶಯಕ್ಕೆ ಶನಿವಾರ ಸಂಜೆ 28,132 ಕ್ಯುಸೆಕ್‌ ಒಳ ಹರಿವು ಇದ್ದು, 451 ಕ್ಯೂಸೆಕ್‌ ಹೊರ ಹರಿವಿದೆ.

ಭರ್ಜರಿ ಮುಂಗಾರು ಮಳೆಯಿಂದಾಗಿ ಕಳೆದ ಒಂದು ವಾರದಿಂದ ಸುಮಾರು 25ಕ್ಕೂ ಹೆಚ್ಚು ಅಡಿ ನೀರು ಜಲಾಶಯಕ್ಕೆ ಬಂದಿದೆ. ಇದೇ ರೀತಿ ಮಳೆ ಮುಂದುವರಿದರೆ ಜುಲೈ 10 ಅಥವಾ 15ರ ವೇಳೆಗೆ ಕನ್ನಂಬಾಡಿ ಕಟ್ಟೆಭರ್ತಿಯಾಗಲಿದೆ. ಕಳೆದ ತಿಂಗಳು ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ 69 ಅಡಿಗೆ ಕುಸಿದಿತ್ತು. ಕಳೆದ ವರ್ಷ ಇದೇ ದಿನ 67.78 ಅಡಿ ನೀರಿತ್ತು.

ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲಾದ್ಯಂತ ಮಳೆ ಪ್ರಮಾಣ ಕಡಿಮೆಯಾಗಿದೆ. ಭಾಗಮಂಡಲದಲ್ಲಿ ಪ್ರವಾಹ ಇಳಿಮುಖ ವಾಗಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾದರೆ ಕೆಆರ್‌ಎಸ್‌ಗೆ ನೀರಿನ ಒಳ ಹರಿವು ಹೆಚ್ಚಾಗಲಿದೆ. ಕಳೆದ 2 ದಶಕಗಳಿಂದ ಜೂನ್‌ ತಿಂಗಳಲ್ಲಿ ಕೆಆರ್‌ಎಸ್‌ ಜಲಾಶಯ 100 ಅಡಿ ತಲುಪಿರುವ ಇತಿಹಾಸವೇ ಇಲ್ಲ ಎಂದು ನೀರಾವರಿ ಇಲಾಖೆ ಅಧಿಕಾರಿ ಬಸವರಾಜೇಗೌಡ ತಿಳಿಸಿದ್ದಾರೆ.

3 ವರ್ಷಗಳಿಂದ ಅಣೆಕಟ್ಟೆಭರ್ತಿಯಾಗದೆ ರೈತರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿರಲಿಲ್ಲ. ಕಟ್ಟು ಪದ್ಧತಿಯಲ್ಲಿ ನೀರು ಹರಿಸಿದರೂ ಸಮರ್ಪಕವಾಗಿ ನಾಲೆಗಳಿಗೆ ನೀರು ಹರಿಸದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಸಾವಿರಾರು ಎಕರೆ ಬೆಳೆ ನೀರಿಲ್ಲದೇ ಒಣಗಿ ಹೋಗಿತ್ತು. ಪ್ರಸ್ತುತ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಹರ್ಷಗೊಂಡಿದ್ದಾರೆ.