ಕಾರವಾರ: ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಐಎನ್‌ಎಸ್‌ ಕದಂಬ ನೌಕಾನೆಲೆ ಪ್ರದೇಶದಲ್ಲಿ ಶೀಘ್ರ ಮಳೆಯಾಗಿ ನೀರಿನ ಪ್ರಮಾಣ ಹೆಚ್ಚದಿದ್ದಲ್ಲಿ ಇಲ್ಲಿ ತಂಗಿರುವ ಕೆಲ ಯುದ್ಧ ಹಡಗುಗಳನ್ನು ಮುಂಬೈ ಅಥವಾ ಗೋವಾಕ್ಕೆ ಸ್ಥಳಾಂತರಿಸುವ ಯೋಚನೆ ಮಾಡಿದೆ.

ದೇಶದ ಅತಿದೊಡ್ಡ ಏರ್‌ಕ್ರಾಪ್ಟ್‌ ಕ್ಯಾರಿಯರ್‌ ಐಎನ್‌ಎಸ್‌ ವಿಕ್ರಮಾದಿತ್ಯ ಸೇರಿದಂತೆ ಹಲವು ನೌಕೆಗಳು ಇಲ್ಲಿನ ನೌಕಾನೆಲೆಯಿಂದಲೆ ಕಾರ್ಯಾಚರಣೆ ನಡೆಸುತ್ತಿವೆ. ಆದರೆ, ಈ ಯುದ್ಧ ನೌಕೆಗಳಲ್ಲಿ ನೀರಿನ ಅಗತ್ಯತೆ ಹೆಚ್ಚಿದೆ. ಯುದ್ಧ ನೌಕೆಗಳಿಗೆ ಅಗತ್ಯ ಪ್ರಮಾಣದ ನೀರನ್ನು ಪೂರೈಕೆ ಮಾಡಲು ಸಾಧ್ಯವಾಗದಂತಾಗಿದೆ.

ಏಕೆಂದರೆ ಗಂಗಾವಳಿ ನದಿಯಿಂದ ಹೊನ್ನಳ್ಳಿ ಬಳಿ ಜಲಮಂಡಳಿ ನೀರನ್ನು ಎತ್ತಿ ಕಾರವಾರ, ಅಂಕೋಲಾ, ಐಎನ್‌ಎಸ್‌ ಕದಂಬ ನೌಕಾನೆಲೆ ಹಾಗೂ ಗ್ರಾಸಿಮ್‌ ಇಂಡಸ್ಟ್ರಿಗಳಿಗೆ ಪೂರೈಕೆ ಮಾಡುತ್ತಿದೆ. ಆದರೆ, ಗಂಗಾವಳಿ ನದಿ ಸಂಪೂರ್ಣವಾಗಿ ಬತ್ತಿ ಹೋಗಿದೆ. ಹೀಗಾಗಿ ಜಲ ಮಂಡಳಿಯಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಜಲ ಮಂಡಳಿಯ ನೀರನ್ನೇ ಅವಲಂಬಿಸಿದ್ದ ನೌಕಾನೆಲೆ ಈಗ ನೀರಿಗಾಗಿ ಸ್ಥಳೀಯ ಬೋರ್‌ವೆಲ್‌, ಬಾವಿಗಳನ್ನು ಹುಡುಕಾಡುತ್ತಿದೆ. ಯುದ್ಧ ನೌಕೆಯ ಜತೆ ನೌಕಾನೆಲೆಯ ಅಧಿಕಾರಿಗಳು, ಸಿಬ್ಬಂದಿ ಮನೆಗಳಿಗೂ ನೀರಿನ ಸಮಸ್ಯೆ ಎದುರಾಗಿದೆ.