1990ರ ದಶಕದಲ್ಲಿ ಬೊಸ್ನಿಯಾದ ‘ಬೋಸ್ನಿಯನ್ ಕ್ರಾಟ್’ ರಾಜ್ಯದಿಂದ ಮುಸ್ಲಿಮರನ್ನು ಹೊರಹಾಕುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆರು ಸೇನಾಧಿಕಾರಿಗಳಲ್ಲಿ ಪ್ರಾಲ್ಜಾಕ್ (72) ಕೂಡ ಒಬ್ಬರಾಗಿದ್ದರು.
ಹೇಗ್(ನ.30): ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಧಿಕರಣ ‘ಯುದ್ಧಪರಾಧ’ಕ್ಕೆ ಸಂಬಂಧಿಸಿದ ತಮ್ಮ ವಿರುದ್ಧದ ತೀರ್ಪು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಬೋಸ್ನಿಯಾದ ಮಾಜಿ ಸೇನಾಧಿಕಾರಿಯೊಬ್ಬರು ಕೋರ್ಟ್ ರೂಂನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೆದರ್ಲೆಂಡ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಧಿಕರಣವು ಬೋಸ್ನಿಯಾದ ಮಾಜಿ ಸೇನಾಧಿಕಾರಿ ಸ್ಲೊಬೊಡಾನ್ ಪ್ರಾಲ್ಜಾಕ್ ವಿರುದ್ಧದ 20 ವರ್ಷದ ಜೈಲು ಶಿಕ್ಷೆಯನ್ನು ಕಾಯಂಗೊಳಿಸಿತ್ತು. ತೀರ್ಪು ಹೊರಬೀಳುತ್ತಿದ್ದಂತೆ, ‘ನಾನು ಅಪರಾಧಿಯಲ್ಲ, ನಾನು ವಿಷ ಕುಡಿದಿದ್ದೇನೆ, ನಾನು ಯುದ್ಧ ಅಪರಾಧಿಯಲ್ಲ, ಶಿಕ್ಷೆಯನ್ನು ನಾನು ವಿರೋಧಿಸುತ್ತೇನೆ’ ಎಂದು ಹೇಳಿ ಪ್ರಾಲ್ಜಾಕ್ ವಿಷ ಸೇವಿಸಿದ್ದಾರೆ.
1990ರ ದಶಕದಲ್ಲಿ ಬೊಸ್ನಿಯಾದ ‘ಬೋಸ್ನಿಯನ್ ಕ್ರಾಟ್’ ರಾಜ್ಯದಿಂದ ಮುಸ್ಲಿಮರನ್ನು ಹೊರಹಾಕುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆರು ಸೇನಾಧಿಕಾರಿಗಳಲ್ಲಿ ಪ್ರಾಲ್ಜಾಕ್ (72) ಕೂಡ ಒಬ್ಬರಾಗಿದ್ದರು. ತಮ್ಮ ಕಕ್ಷಿದಾರ ವಿಷ ಸೇವಿಸಿದ್ದಾರೆ ಎಂದು ಅವರ ನ್ಯಾಯವಾದಿ ಕೂಗಿದ ಬಳಿಕ, ವಿಚಾರಣೆ ಸ್ಥಗಿತಗೊಳಿಸಿ ಕೋರ್ಟ್ ರೂಂ ಮುಚ್ಚಲಾಯಿತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ, ಅವರು ಕೊನೆಯುಸಿರೆಳೆದರು. ಇಡೀ ಘಟನೆ ವಿಡಿಯೋದಲ್ಲಿ ಚಿತ್ರೀಕರಣಗೊಂಡಿದೆ.
