ಇವರ ಸಾವಿನಿಂದ ದುಃಖವಾದುದಕ್ಕಿಂತಲೂ ಹೆಚ್ಚಾಗಿ ದೇಶಕ್ಕಾಗಿ ಬಲಿದಾನಗೈದ ಹೆಮ್ಮೆ ಈ ಕುಟುಂಬಗಳಲ್ಲಿರುವುದು ನಿಜಕ್ಕೂ ಅದ್ಭುತ. ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ಯೋಧರ ಆತ್ಮಕ್ಕೆ ಶಾಂತಿ ಸಿಕ್ಕಬೇಕಾದರೆ ಶತ್ರುಗಳಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಈ ಕುಟುಂದವರು ಆಗ್ರಹಿಸಿದ್ದಾರೆ.

ನವದೆಹಲಿ(ಮೇ 02): ತನ್ನ ಅಪ್ಪನ ತಲೆ ಕಡಿದಿರುವ ಶತ್ರುಗಳ 5 ತಲೆಗಳನ್ನು ಕಡಿದು ತನ್ನಿ ಎಂದು ಉತ್ತರಪ್ರದೇಶದ ಬಲಿದಾನಿ ಬಿಎಸ್'ಎಫ್ ಯೋಧ ಪ್ರೇಮ್ ಸಾಗರ್'ನ ಮಗಳು ಕೇಳಿಕೊಂಡಿದ್ದಾಳೆ. ಅಪ್ಪನ ಸಾವಿನಿಂದ ನೊಂದಿರುವ ಸರೋಜ್ ಎಂಬ ಈ ಹುಡುಗಿಯ ಪ್ರತೀಕಾರದ ಮಾತುಗಳು ದೇಶಾಭಿಮಾನಿಗಳ ಕಿಚ್ಚೆಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹುಡುಗಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ವಿರುದ್ಧ ಕಠಿಣ ಕಾರ್ಯಾಚರಣೆ ಕೈಗೊಳ್ಳಲು ವಿಫಲವಾಗಿರುವ ಮೋದಿ ಸರಕಾರದ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ.

ನಿನ್ನೆ ಪಾಕಿಸ್ತಾನೀ ಸೈನಿಕರ ತಂಡವೊಂದು ಭಾರತದ ಗಡಿಭಾಗದೊಳಗೆ ನುಗ್ಗಿ ಇಬ್ಬರು ಸೈನಿಕರ ಶಿರಚ್ಛೇದ ಮಾಡಿ, ಮತ್ತೊಬ್ಬರನ್ನ ಗಾಯಗೊಳಿಸಿತ್ತು. 22 ಸಿಖ್ ರೆಜಿಮೆಂಟ್'ನ ನಯೀಬ್ ಸುಬೇದಾರ್ ಪರಮ್'ಜೀತ್ ಸಿಂಗ್ ಹಾಗೂ ಬಿಎಸ್ಎಫ್ 200 ಬೆಟಾಲಿಯನ್'ನ ಹೆಡ್ ಕಾನ್ಸ್'ಟೇಬಲ್ ಉತ್ತರಪ್ರದೇಶದ ಪ್ರೇಮ್ ಸಾಗರ್(50) ಅವರ ತಲೆ ಕತ್ತರಿಸಿಹೋಗಿದ್ದರು ಪಾಕಿಸ್ತಾನಿಗಳು.

50 ವರ್ಷದ ಪ್ರೇಮ್ ಸಾಗರ್ 1994ರಲ್ಲೇ ಗಡಿ ಭದ್ರತಾ ಪಡೆಗೆ ಸೇರ್ಪಡೆಯಾಗಿದ್ದರು. 2 ವರ್ಷದ ಹಿಂದಷ್ಟೇ ಅವರನ್ನು ಜಮ್ಮು-ಕಾಶ್ಮೀರಕ್ಕೆ ನಿಯೋಜನೆ ಮಾಡಲಾಗಿತ್ತು. ಎರಡು ತಿಂಗಳ ಹಿಂದೆ ಅವರು ತಮ್ಮ ಊರಿಗೆ ಹೋಗಿ ಮನೆಯವರನ್ನು ಮಾತಾಡಿಸಿ ಬಂದಿದ್ದರು. ಇದೀಗ ಅವರ ಸಾವಿನ ಸುದ್ದಿ ಪ್ರೇಮ್ ಸಾಗರ್ ಕುಟುಂಬವನ್ನು ಕಂಗೆಡಿಸಿದೆ. ಇದೇ ಪರಿಸ್ಥಿತಿ ಪಂಜಾಬ್'ನ ಪರಮ್'ಜೀತ್ ಸಿಂಗ್ ಕುಟುಂಬದಲ್ಲೂ ಇದೆ. ಇವರ ಸಾವಿನಿಂದ ದುಃಖವಾದುದಕ್ಕಿಂತಲೂ ಹೆಚ್ಚಾಗಿ ದೇಶಕ್ಕಾಗಿ ಬಲಿದಾನಗೈದ ಹೆಮ್ಮೆ ಈ ಕುಟುಂಬಗಳಲ್ಲಿರುವುದು ನಿಜಕ್ಕೂ ಅದ್ಭುತ. ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ಯೋಧರ ಆತ್ಮಕ್ಕೆ ಶಾಂತಿ ಸಿಕ್ಕಬೇಕಾದರೆ ಶತ್ರುಗಳಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಈ ಕುಟುಂದವರು ಆಗ್ರಹಿಸಿದ್ದಾರೆ.