ದುಬೈ(ಡಿ.04): ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಕ್ಕಿದೆ.  ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಆರೋಪಿಯಾಗಿರುವ ದಳ್ಳಾಳಿ ಕ್ರಿಶ್ಚಿಯನ್ ಮೈಕೆಲ್ ನನ್ನು ದುಬೈ ಸರ್ಕಾರ ಗಡಿಪಾರು ಮಾಡಿ ಆದೇಶ ಹೊರಡಿಸಿದೆ.

ಇಂದು ರಾತ್ರಿ 10:30 ಸುಮಾರಿಗೆ ಆರೋಪಿ ಮೈಕೆಲ್ ನನ್ನು ಭಾರತಕ್ಕೆ ಕರೆತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಗೆ ಆರೋಪಿಯನ್ನು ಹಾಜರುಪಡಿಸಲಿದ್ದು, ಕಸ್ಟಡಿಗೆ ನೀಡುವಂತೆ ಸಿಬಿಐ ಮನವಿ ಮಾಡಲಿದೆ.

ಇಟಲಿ ಮೂಲದ ಉದ್ಯಮಿ ಕ್ರಿಶ್ಚಿಯನ್ ಮೈಕೆಲ್ ದುಬೈನಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲದೇ ಗಡಿಪಾರು ಮಾಡದಂತೆ ದುಬೈ ಕೋರ್ಟ್ ನಲ್ಲಿಅರ್ಜಿ ಸಲ್ಲಿಸಿದ್ದ. ಮೈಕೆಲ್ ಮನವಿ ತಿರಸ್ಕರಿಸಿದ ಕೋರ್ಟ್ ಗಡಿಪಾರಿಗೆ ಆದೇಶಿಸಿತ್ತು. 

ಕೋರ್ಟ್ ಆದೇಶದಂತೆ ದುಬೈ ಸರ್ಕಾರ ಮೈಕೆಲ್ ನನ್ನು ಗಡಿಪಾಡು ಮಾಡಿದೆ. ಈ ಮೂಲಕ ಹಿಂದೆ ದುಬೈ ಪ್ರವಾಸದ ವೇಳೆ ಮೋದಿ ಮಾಡಿದ್ದ ಮನವಿಗೆ ದುಬೈ ಸರ್ಕಾರ ಸ್ಪಂದಿಸಿದ್ದು, ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಯಶಸ್ಸು ಸಿಕ್ಕಂತಾಗಿದೆ.

3600 ಕೋಟಿ ಮೌಲ್ಯದ ಈ ಹಗರಣ 2010ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.