ತೀವ್ರ ಕುತೂಹಲ ಮೂಡಿಸಿರುವ ಬಳ್ಳಾರಿ ಲೋಕಸಭಾ ಉಪಚುನಾಣೆಗೆ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಗೆ ಟಿಕೆಟ್ ಘೋಷಿಸಿದೆ. ಹಾಗಾದ್ರೆ ಯಾರು ಆ ಅಭ್ಯರ್ಥಿ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು, (ಅ.15): ಗಣಿನಾಡು ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಆದರೆ, ಅಚ್ಚರಿ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ.
ಸರಣಿ ಸಭೆಗಳ ಬಳಿಕ ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಳ್ಳಾರಿಯ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ.ಎಸ್ ಉಗ್ರಪ್ಪ ಅವರನ್ನು ಅಂತಿಮಗೊಳಿಸಲಾಗಿದೆ.
ಕಾಂಗ್ರೆಸ್ ಸ್ಥಳೀಯ ಮುಖಂಡರಾದ ದೇವೇಂದ್ರಪ್ಪ, ನೆಟ್ಕಲ್ಲಪ್ಪ, ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಸೇರಿದಂತೆ ನಾಲ್ಕು ಮಂದಿ ಪ್ರಮುಖವಾಗಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
ಆದರೆ ಸ್ಥಳೀಯ ಮಟ್ಟದಲ್ಲಿ ಯಾರನ್ನೇ ಆಯ್ಕೆ ಮಾಡಿದರು ಬಂಡಾಯ ಭುಗಿಲೇಳುವ ಆತಂಕ ಎದುರಾಗಿತ್ತು. ಕಾಂಗ್ರೆಸ್ ಹಿರಿಯ ಮುಖಂಡ ವಿಎಸ್ ಉಗ್ರಪ್ಪ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಇನ್ನು ಬಿಜೆಪಿಯಿಂದ ಶಾಸಕ ಶ್ರೀರಾಮುಲು ಅವರ ಸಹೋದರಿ ಜೆ. ಶಾಂತ ಅವರನ್ನು ಕಣಕ್ಕಿಳಿಸಿದ್ದು, ನಾಳೆ (ಮಂಗಳವಾರ) ನಾಮಪತ್ರ ಸಲ್ಲಿಸಲಿದ್ದಾರೆ.
ಈ ಹಿಂದೆ ಬಿಜೆಪಿಯ ಬಿ. ಶ್ರೀರಾಮುಲು ಅವರು ಬಳ್ಳಾರಿಯ ಸಂಸದರಾಗಿದ್ದು. ಆದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಮೊಣಕಾಲ್ಮೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ್ದು, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದ್ರಿಂದ ಬಳ್ಳಾರಿ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಇದೀಗ ಈ ಸ್ಥಾನಕ್ಕೆ ಇದೇ ನವೆಂಬರ್ 3ರಂದು ಮತದಾನ ನಡೆಯಲಿದ್ದು, ನ. 6ಕ್ಕೆ ಫಲಿತಾಂಶ ಹೊರಬೀಳಲಿದೆ.
