Asianet Suvarna News Asianet Suvarna News

ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ: ಇಂದು ಮತದಾನ

ಬೀದಿಬೀದಿಗಳಲ್ಲೂ ಪಾದಯಾತ್ರೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೇ ಅಭ್ಯರ್ಥಿ ಎಂದು ಭಾಸವಾಗುವಂತೆ ಮತ ಯಾಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿ ಯೂರಪ್ಪ ಕೂಡ ಅದೇ ಧಾಟಿಯಲ್ಲಿ ಪ್ರಚಾರ ನಡೆಸಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಮುಂದಿನ ಸರ್ಕಾರ ಬಿಜೆಪಿಯದು, ತಾವೇ ಮುಖ್ಯಮಂತ್ರಿ ಎನ್ನುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಹೀಗಾಗಿ ಈ ಎರಡೂ ಕ್ಷೇತ್ರಗಳ ಚುನಾವಣೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ನೇರ ಸಮರ ಎಂದೇ ವಿಶ್ಲೇಷಿಸಲಾಗುತ್ತಿದೆ.

voting in nanjangud and gundlupet bye elections

ಬೆಂಗಳೂರು(ಏ. 09): ಮುಂಬರುವ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಬಿಂಬಿತವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯ ಅಂತಿಮ ‘ಶೋಡೌನ್‌'ಗೆ ವೇದಿಕೆ ಸಜ್ಜಾಗಿದೆ. ಭಾನುವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೂ ನಡೆಯಲಿರುವ ಮತದಾನ ಈ ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ಮಾತ್ರವಲ್ಲದೆ, ಆಡಳಿತ ಪಕ್ಷ ಕಾಂಗ್ರೆಸ್‌ ಹಾಗೂ ಎದುರಾಳಿ ಬಿಜೆಪಿಯ ಪ್ರಮುಖ ನಾಯಕರ ಪ್ರಭಾವವನ್ನು ನಿಕಷಕ್ಕೆ ಒಡ್ಡಲಿದೆ.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಾತ್ರ ಹಾಗೂ ಪ್ರಾಮುಖ್ಯತೆಯನ್ನು ಈ ಉಪ ಚುನಾವಣೆ ನಿರ್ಧರಿಸುತ್ತದೆ ಎಂಬ ಅರಿವಿರುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕ್ಷೇತ್ರಗಳಲ್ಲೇ ಬೀಡು ಬಿಟ್ಟು ಸಂಪೂರ್ಣ ಸಾಮರ್ಥ್ಯವನ್ನು ಧಾರೆಯೆರೆದಿದ್ದಾರೆ. ಈ ನಾಯಕರಿಗೆ ಸಂವಾದಿಯಾಗಿ ಪ್ರಮುಖ ಹುದ್ದೆಗಳ

ನಿರೀಕ್ಷೆಯಲ್ಲಿರುವ ಎರಡೂ ಪಕ್ಷಗಳ ಎರಡನೇ ಹಂತದ ನಾಯಕರು ಸಹ ಇವರಿಗೆ ಹೆಗಲು ಕೊಟ್ಟು ದುಡಿದಿದ್ದಾರೆ. ಈ ಎಲ್ಲಾ ದುಡಿಮೆಗೆ ಉಪ ಚುನಾವಣೆ ನಡೆಯುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಮತದಾರರು ಯಾವ ರೀತಿಯ ‘ಕೂಲಿ' ನೀಡಲಿದ್ದಾರೆ ಎಂಬುದನ್ನು ಭಾನುವಾರ ನಡೆಯಲಿರುವ ಮತದಾನ ನಿರ್ಧರಿಸಲಿದೆ.

ದಲಿತ ಸಮುದಾಯದ ಮುಖಂಡ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ಅವರ ರಾಜಿನಾಮೆಯಿಂದ ನಂಜನಗೂಡು ಕ್ಷೇತ್ರ ತೆರವಾಗಿತ್ತು. ಈ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಗಳಾಗಿ ಕಾಂಗ್ರೆಸ್‌ನಿಂದ ಕಳಲೆ ಕೇಶವಮೂರ್ತಿ, ಬಿಜೆಪಿಯಿಂದ ಶ್ರೀನಿವಾಸ ಪ್ರಸಾದ್‌ ಹೋರಾಟಕ್ಕಿಳಿದಿದ್ದಾರೆ. ಆದರೆ ಸರ್ಕಾರ ಮತ್ತು ಪ್ರತಿಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ, ಅದಕ್ಕಿಂತಲೂ ಹೆಚ್ಚಾಗಿ ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಅಳಿವು-ಉಳಿವಿನ ಹೋರಾಟ ಎಂದು ಭಾವಿಸಿವೆ. 

ಅದೇ ರೀತಿ ಸಚಿವ ಎಚ್‌.ಎಸ್‌.ಮಹಾದೇವ ಪ್ರಸಾದ್‌ ಅವರ ಅಕಾಲಿಕ ಮರಣದಿಂದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ತೆರವಾಗಿದೆ. ಅಲ್ಲಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಸ್‌. ನಿರಂಜನ್‌ ಮತ್ತು ಕಾಂಗ್ರೆಸ್‌ನಿಂದ ಮಹದೇವಪ್ರಸಾದ್‌ ಪತ್ನಿ ಗೀತಾ ನಡುವೆ ನೇರ ಹೋರಾಟ ನಡೆಯಲಿದೆ. ಐದು ಬಾರಿ ಇದೇ ಕ್ಷೇತ್ರದಿಂದ ಮಹಾದೇವಪ್ರಸಾದ್‌ ಆಯ್ಕೆಯಾಗಿದ್ದು, ಅವರು ತಮ್ಮ ಆಪ್ತರು ಎಂಬ ಕಾರಣಕ್ಕೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಿಎಂ ಯತ್ನಿಸಿ ದ್ದಾರೆ. ಹಾಗೆಯೇ ಯಡಿಯೂರಪ್ಪ ಕೂಡ ಬಿಜೆಪಿಯ ನಿರಂಜನ್‌ ಎರಡು ಬಾರಿ ಸೋತಿದ್ದಾರೆ ಎನ್ನುವ ಅನುಕಂಪದ ಅಸ್ತ್ರ ಬಳಸಿದ್ದಾರೆ.

ಹೀಗಾಗಿಯೇ ಎರಡೂ ಪಕ್ಷಗಳು ಈ ಚುನಾವಣೆಯನ್ನು ಗೆಲ್ಲುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಅಲೆ ಸೃಷ್ಟಿಸಿಕೊಳ್ಳುವ ಹುಮ್ಮಸ್ಸಿನೊಂದಿಗೆ ಎಲ್ಲಾ ರೀತಿಯ ಕಸರತ್ತುಗಳನ್ನು ನಡೆಸಿವೆ. ಬೀದಿಬೀದಿಗಳಲ್ಲೂ ಪಾದಯಾತ್ರೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೇ ಅಭ್ಯರ್ಥಿ ಎಂದು ಭಾಸವಾಗುವಂತೆ ಮತ ಯಾಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿ ಯೂರಪ್ಪ ಕೂಡ ಅದೇ ಧಾಟಿಯಲ್ಲಿ ಪ್ರಚಾರ ನಡೆಸಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಮುಂದಿನ ಸರ್ಕಾರ ಬಿಜೆಪಿಯದು, ತಾವೇ ಮುಖ್ಯಮಂತ್ರಿ ಎನ್ನುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಹೀಗಾಗಿ ಈ ಎರಡೂ ಕ್ಷೇತ್ರಗಳ ಚುನಾವಣೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ನೇರ ಸಮರ ಎಂದೇ ವಿಶ್ಲೇಷಿಸಲಾಗುತ್ತಿದೆ.

ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ಆರೋಪ, ಪ್ರತ್ಯಾರೋಪ, ನಿಂದನೆಗಳ ಪೈಪೋಟಿಯೊಂದಿಗೆ ಅಬ್ಬರದ ಪ್ರಚಾರ ಪೂರೈಸಿವೆ. ಎರಡೂ ಪಕ್ಷದವರು ಹಣ ಹಂಚಿದ ಆರೋಪಗಳನ್ನೂ ಎದುರಿಸುತ್ತಿದ್ದು, ಚುನಾವಣಾ ಆಯೋಗದಲ್ಲಿ ದೂರುಗಳೂ ದಾಖಲಾಗಿವೆ. ಇಷ್ಟೆಲ್ಲದರ ಮಧ್ಯೆ, ಮತದಾರ ಪ್ರಭು ಕಣದಲ್ಲಿರುವ ಅಭ್ಯರ್ಥಿಗಳ ಹಣೆ ಬರಹವನ್ನು ಬರೆಯಲು ಮುಂದಾಗಿದ್ದಾನೆ. ಎರಡೂ ಜಿಲ್ಲೆಗಳ ಪ್ರತಿಷ್ಠೆಯ ಈ ಕಣಗಳಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಸಲುವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತಗಳು ಭಾರೀ ಬಿಗಿ ಭದ್ರತೆಯೊಂದಿಗೆ ಸಕಲ ಸಿದ್ಧತೆ ಮಾಡಿಕೊಂಡಿವೆ. 

ಈ ಬಗ್ಗೆ ಚುನಾವಣಾಧಿಕಾರಿಯೂ ಆದ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್‌ ಮತ್ತು ಗುಂಡ್ಲುಪೇಟೆ ಕ್ಷೇತ್ರದ ಚುನಾವಣಾಧಿಕಾರಿ ಸ್ಥಳೀಯ ತಹಸೀಲ್ದಾರ್‌ ಕೆ.ಸಿದ್ದು ಪ್ರತ್ಯೇಕ ಪತ್ರಿಕಾಗೋಷ್ಠಿಗಳನ್ನು ನಡೆಸಿ ವಿವರಣೆ ನೀಡಿದ್ದಾರೆ.

ನಂಜನಗೂಡಿನಲ್ಲಿ ಸಿದ್ಧತೆ: ಉಪ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, 6 ತುಕಡಿ ಅರೆಸೇನಾ ಪಡೆ, 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಪೈಕಿ ಒಬ್ಬರು ಎಸ್ಪಿ, ಓರ್ವ ಹೆಚ್ಚುವರಿ ಎಸ್ಪಿ, ಐವರು ಡಿವೈಎಸ್ಪಿ, 16 ಇನ್ಸ್‌ಪೆಕ್ಟರ್‌, 58 ಮಂದಿ ಎಸ್‌ಐ, 167 ಎಎಸ್‌ಐ, 409 ಮುಖ್ಯಪೇದೆ, 243 ಪೇದೆ ಹಾಗೂ 210 ಗೃಹರಕ್ಷಕರು, 10 ಕೆಎಸ್‌ಆರ್‌ಪಿ ತುಕಡಿ, 18 ಡಿಎಆರ್‌ ಭದ್ರತೆಗಾಗಿ ನಿಯೋಜಿಸಲಾಗಿದೆ.

ಮತದಾನವು ಬೆಳಗ್ಗೆ 7ಕ್ಕೆ ಆರಂಭವಾಗಿ ಸಂಜೆ 5ಕ್ಕೆ ಕೊನೆಗೊಳ್ಳಲಿದ್ದು, 5 ಗಂಟೆಗೆ ಮುನ್ನ ಸಾಲಿನಲ್ಲಿ ನಿಂತಿದ್ದರೆ ಸಾಲು ಮುಗಿಯುವವರೆಗೆ ಮತಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. 

ನಂಜನಗೂಡು ಕ್ಷೇತ್ರದಲ್ಲಿ 2,01,818 ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ 1,01,930 ಪುರುಷ ಮತ್ತು 99,888 ಮಹಿಳಾ ಮತದಾರರಿದ್ದಾರೆ. ಚುನಾವಣಾ ಆಯೋಗದ ಶಿಫಾರಸ್ಸಿನಂತೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುತ್ತದೆ. ಮತಚಲಾಯಿಸಲು ಚುನಾವಣಾ ಪಟ್ಟಿಯಲ್ಲಿ ಹೆಸರಿದ್ದು, ಚುನಾವಣಾ ಚೀಟಿ ಇಲ್ಲದವರು ಆಧಾರ್‌ ಕಾರ್ಡ್‌, ಪಾಸ್‌ ಪೋರ್ಟ್‌, ಪಾನ್‌ ಕಾರ್ಡ್‌, ನರೇಗಾ ಜಾಬ್‌ ಕಾರ್ಡ್‌, ಡ್ರೈವಿಂಗ್‌ಲೈಸನ್ಸ್‌, ಚುನಾವಣಾ ಅಯೋಗದಿಂದ ನೀಡಿರುವ ವೋಟರ್‌ ಸ್ಲಿಪ್‌ ಸೇರಿದಂತೆ 12 ರೀತಿಯ ದಾಖಲೆ ಪರಿಗಣಿಸಲಾಗುತ್ತದೆ.
ಕ್ಷೇತ್ರದಲ್ಲಿ 236 ಮತಗಟ್ಟೆಗಳಿದ್ದು, ಅದರಲ್ಲಿ 72 ಅತಿ ಸೂಕ್ಷ್ಮ, 124 ಸೂಕ್ಷ್ಮ ಮತ್ತು 40 ಮತಗಟ್ಟೆಗಳು ಸಾಧಾರಣ ಮತಗಟ್ಟೆಗಳಾಗಿವೆ. ಈ ಎಲ್ಲಾ ಮತಗಟ್ಟೆಗಳಿಗೂ ಈ ಮೊದಲು ಕಂಟ್ರೋಲ್‌ ಯೂನಿಟ್‌, ಬ್ಯಾಲೆಟ್‌ ಯೂನಿಟ್‌ಗಳನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಪ್ರಥಮ ಬಾರಿಗೆ ವಿವಿಪ್ಯಾಟ್‌ (ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ ಟ್ರಯಲ್‌) ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಚುನಾವಣಾಧಿಕಾರಿ ಡಿ.ರಂದೀಪ್‌ ಹೇಳಿದ್ದಾರೆ.

ಮತದಾನ: ಗುಂಡ್ಲುಪೇಟೆ ಸಜ್ಜು 
ಗುಂಡ್ಲುಪೇಟೆ ಕ್ಷೇತ್ರದಲ್ಲಿ 250 ಮತಗಟ್ಟೆಯಲ್ಲಿ 20 ಅತೀ ಸೂಕ್ಷ್ಮ, 40 ಸೂಕ್ಷ್ಮ, 139 ಸಾಧಾರಣ ಮತಗಟ್ಟೆಗಳಿವೆ. ಒಂದು ಮತಗಟ್ಟೆಗೆ ಮತಗಟ್ಟೆಅಧಿಕಾರಿ, ಇಬ್ಬರು ಸಹಾಯಕ ಅಧಿಕಾರಿಗಳು 3 ಜನ ಮತದಾನ ಸಿಬ್ಬಂದಿ ನಿಯೋಜಿಸಲಾಗಿದೆ. 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 4 ಮಂದಿ ಡಿವೈಎಸ್‌ಪಿ 8 ಮಂದಿ ವೃತ್ತ ನಿರೀಕ್ಷಕರು, 10 ಮಂದಿ ಸಬ್‌ ಇನ್ಸ್‌ಪೆಕ್ಟರ್‌, 18 ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆ ತುಕಡಿ, 8 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 2 ಸಾವಿರ ಪೊಲೀಸರನ್ನು ನೇಮಿಸಲಾಗಿದೆ. ರಿಮೋಟ್‌ ಏರಿಯಾ ಮತಗಟ್ಟೆಗೆ 4 ಮಂದಿ ಪೊಲೀಸ್‌ ಸಿಬ್ಬಂದಿ, ಅತಿ ಸೂಕ್ಷ್ಮ 3 ಮಂದಿ ಸೂಕ್ಷ್ಮ ಹಾಗೂ ಸಾಧಾರಣ ಮತಗಟ್ಟೆಗೆ 2 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಸಿದ್ದು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios