ಭವಿಷ್ಯನಿಧಿ, ನಿವೃತ್ತಿ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಭದ್ರಾವತಿ ವಿಐಎಸ್‌ಎಲ್, ಎಂಪಿಎಂ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ(ನ.24): ಭವಿಷ್ಯನಿಧಿ, ನಿವೃತ್ತಿ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಭದ್ರಾವತಿ ವಿಐಎಸ್‌ಎಲ್, ಎಂಪಿಎಂ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ಪೆನ್ಷನ್‌ದಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಈಗಾಗಲೇ ಕೇಂದ್ರ ಕಾರ್ಮಿಕ ಮಂತ್ರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಉಚ್ಚ ನ್ಯಾಯಾಲಯದಲ್ಲೂ ಹಲವು ಕೇಸ್ ದಾಖಲಾಗಿವೆ. ಮಂತ್ರಿಗಳು ಕೋರ್ಟ್ ಆದೇಶವನ್ನು ಜಾರಿಗೆ ಕೊಡುವ ಆಶ್ವಾಸನೆ ನೀಡಿದ್ದಾರೆ. ಆದರೆ ಭವಿಷ್ಯ ನಿಧಿ ಕಚೇರಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದ್ದು, ಭವಿಷ್ಯನಿಧಿ ಪೆನ್ಷನ್ ದಾರರಿಗೆ ಅವರ ಪೂರ್ಣ ವೇತನದಲ್ಲಿ ಪೆನ್ಷನ್ ನಿಗದಿಪಡಿಸಿ ಹೆಚ್ಚುವರಿ ಪೆನ್ಷನ್ ಬಾಕಿ ನೀಡಬೇಕೆಂದು ತಿಳಿಸಿದೆ. ಈ ತೀರ್ಪಿನ ಅನ್ವಯ ಬಹುಪಾಲು ಪೆನ್ಪನ್‌ದಾರರಿಗೆ ಕನಿಷ್ಟ 3 ಸಾವಿರ ರೂ.ನಿಂದ 30 ಸಾವಿರದವರೆಗೆ ಪೆನ್ಷನ್ ನಿಗದಿಯಾಗುವ ಸಾಧ್ಯತೆ ಇದೆ. ಅದರಂತೆ ಪೆನ್ಷನ್‌ದಾರರು 1995ರರ ನವೆಂಬರ್ 16ರಿಂದ ತಮ್ಮ ನಿವೃತ್ತಿ ದಿನಾಂಕದ ವರೆಗೆ ಹೆಚ್ಚುವರಿ ವಂತಿಕೆ ಯನ್ನು ಬಡ್ಡಿಸಹಿತ ಪೆನ್ಫನ್ ಫಂಡ್‌ಗೆ ಪಾವತಿ ಮಾಡಬೇಕಾಗಿದೆ ಎಂದು ತಿಳಿಸಿದರು.

ಭವಿಷ್ಯ ನಿಧಿ ಕೇಂದ್ರ ಕಚೇರಿ ಸುತ್ತೋಲೆ ಹೊರಡಿಸಿದ್ದು, ನ್ಯಾಯಾಲಯದ ಆದೇಶವು ಎಲ್ಲ ಪೆನ್ಷನ್‌ದಾರರಿಗೆ ಅನ್ವಯವಾಗುವುದೆಂದು ತಿಳಿಸಿದೆ. ಆದರೆ ಪುನಃ ವಿಭಾಗೀಯ ಕಚೇರಿಗೆ ಮತ್ತೊಂದು ಸುತ್ತೋಲೆ ಕಳುಹಿಸಿ ವಿನಾಯಿತಿ ಹೊಂದಿದ ಕಾರ್ಖಾನೆಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ. ಆದರೆ ನ್ಯಾಯಾಲಯದ ಆದೇಶದಲ್ಲಿ ಈ ರೀತಿ ಯಾವುದೇ ಉಲ್ಲೇಖ ಇರುವುದಿಲ್ಲ. ಇದರಿಂದಾಗಿ ದೇಶಾದ್ಯಂತ ಸುಮಾರು 10 ಲಕ್ಷ ಪೆನ್ಷನ್ ದಾರರಿಗೆ ಅನ್ಯಾಯವಾಗಲಿದೆ ಎಂದರು. ಭವಿಷ್ಯ ನಿಧಿ ಸಂಸ್ಥೆಯ ಸಭೆಯು ಕೇಂದ್ರ ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಭೆಯಲ್ಲಿ ನಿಶ್ಚಿತ ತೀರ್ಮಾನ ತೆಗೆದುಕೊಂಡು ಕೋರ್ಟ್ ಆದೇಶವನ್ನು ಜಾರಿಗೆ ಕೊಡುವಂತೆ ದೇಶಾದ್ಯಂತ ಒತ್ತಾಯ ಮಾಡಲಾಗಿದೆ ಎಂದು ಹೇಳಿದರು.

ನ್ಯಾಷನಲ್ ಕಾನ್ಫಿಡರೇಷನ್ ಆಫ್ ರಿಟೈರೀಸ್ (ಎನ್‌ಸಿಆರ್) ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಕೂಡಲೇ ಕಾರ್ಮಿಕರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎನ್ ಸಿಆರ್ ನೇತೃತ್ವದಲ್ಲಿ ದೆಹಲಿಯ ಭವಿಷ್ಯ ನಿಧಿ ಕೇಂದ್ರ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದ್ದು, ಅದರಂತೆ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಬೆಂಬಲ ಸೂಚಿಸಲಾಯಿತು. ಸಂಘದ ನರಸಿಂಹಯ್ಯ, ಎಸ್. ನರಸಿಂಹಾಚಾರ್, ಹನುಮಂತಪ್ಪ, ರಾಮಲಿಂಗಯ್ಯ, ಬಸವರಾಜ್ ಮತ್ತಿತರರು ಇದ್ದರು.