ಬೆಂಗಳೂರು :  ಸಾಹಸಸಿಂಹ ಡಾ. ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಎದ್ದಿರುವ ಗೊಂದಲ ಹಾಗೂ ವಿವಾದಗಳ ಕುರಿತು ವಿಷ್ಣುವರ್ಧನ್‌ ಅಭಿಮಾನಿಗಳ ಜತೆ ಅನಿರುದ್ಧ ಮಾತುಕತೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿರುವ ವಿಷ್ಣುವರ್ಧನ್‌ ನಿವಾಸಕ್ಕೆ ಆಗಮಿಸಿದ್ದ ಅಭಿಮಾನಿಗಳೊಂದಿಗೆ ಭಾನುವಾರ ಮಾತನಾಡಿದ ಅನಿರುದ್ಧ, ವಿಷ್ಣು ಸ್ಮಾರಕ ಎಲ್ಲಿ ನಿರ್ಮಾಣಗೊಂಡರೆ ಒಳ್ಳೆಯದು, ತಾವು ಯಾಕೆ ಮೈಸೂರಿನಲ್ಲೇ ಸ್ಮಾರಕ ಮಾಡಿ ಎನ್ನುತ್ತಿದ್ದೇವೆ ಎಂಬುದನ್ನು ವಿವರಿಸಿದರು. ಇದೇ ವೇಳೆ, ಸ್ಮಾರಕ ಕೇವಲ ಸಮಾಧಿಯಾಗಿ ಉಳಿಯಬಾರದು. ಈ ಕಾರಣಕ್ಕೆ ಪ್ರತ್ಯೇಕವಾದ ಜಾಗ ಕೇಳುತ್ತಿದ್ದೇವೆ ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ವಿಚಾರದಲ್ಲಿ ಹೀಗೆ ವಿಳಂಬ ದೋರಣೆ ಅನುಸರಿಸುತ್ತಿದ್ದರೆ ಕರ್ನಾಟಕ ಬಂದ್‌ಗೆ ಕರೆ ಕೊಡಬೇಕೆಂದು ಅಭಿಮಾನಿಗಳು ಒತ್ತಾಯಿಸಿದರು. ಆದರೆ, ಅದನ್ನು ತಿರಸ್ಕರಿಸಿರುವ ಅನಿರುದ್ಧ, ‘ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಕೂಡದು. ಬಂದ್‌ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಕಾನೂನು ಬದ್ಧವಾಗಿಯೇ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ. ಈ ವಿಚಾರದಲ್ಲಿ ಅಭಿಮಾನಿಗಳು ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು ಎನ್ನಲಾಗಿದೆ. ಈ ವಿಷಯವನ್ನು ಅನಿರುದ್ಧ ಅವರೇ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸ್ಮಾರಕ ನಿರ್ಮಾಣ ವಿಚಾರದಲ್ಲಿ ತುಂಬಾ ಗೊಂದಲ ಮೂಡಿಸಲಾಗುತ್ತಿದೆ. ಅಭಿಮಾನಿಗಳಿಗೂ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಮನೆಗೆ ಬಂದಿದ್ದ ವಿಷ್ಣು ಸೇನಾ ಅಭಿಮಾನಿಗಳ ಜತೆ ನಾನು ಮಾತನಾಡಿ ಅವರಿಗೆ ಸೂಕ್ತ ಮಾಹಿತಿ ನೀಡಿದ್ದೇನೆ. ಸ್ಮಾರಕ ನಿರ್ಮಾಣದ ವಿಚಾರದಲ್ಲಿ ವಿಷ್ಣುವರ್ಧನ್‌ ಕುಟುಂಬ ಏನೇ ನಿರ್ಧಾರ ತೆಗೆದುಕೊಂಡರೂ ಜತೆಗಿರುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.

- ಅನಿರುದ್ಧ್,  ನಟ