ಇನ್ಫೊಸಿಸ್ ಸಿಇಓ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಸಂಸ್ಥೆಯ ಸಹ ಸಂಸ್ಥಾಪಕರಲ್ಲೊಬ್ಬರಾದ ನಂದನ್ ನೀಲೇಕಣಿಯವರನ್ನು ವಾಪಸ್ ಕರೆತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನವದೆಹಲಿ (ಆ.23): ಇನ್ಫೊಸಿಸ್ ಸಿಇಓ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಸಂಸ್ಥೆಯ ಸಹ ಸಂಸ್ಥಾಪಕರಲ್ಲೊಬ್ಬರಾದ ನಂದನ್ ನೀಲೇಕಣಿಯವರನ್ನು ವಾಪಸ್ ಕರೆತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉನ್ನತ ಮಟ್ಟದ ಬಂಡವಾಳ ಹೂಡಿಕೆದಾರರು ಇನ್ಫೊಸಿಸ್ ಮಂಡಳಿಗೆ ಪತ್ರ ಬರೆದಿದ್ದು, ನಂದನ್ ನಿಲೇಕಣೀಯವರನ್ನು ಮತ್ತೊಮ್ಮೆ ಕರೆ ತನ್ನಿ. ಇದರಿಂದಾಗಿ ನಮ್ಮ ಗ್ರಾಹಕರು, ಹೂಡಿಕೆದಾರರು ಹಾಗೂ ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ಬರುತ್ತದೆ ಎಂದು ತಮ್ಮ ಮೇಲ್’ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ನಂದನ್ ನಿಲೇಕಣಿಯವರು ಇನ್ಫೊಸಿಸ್ ಸಹ ಸಂಸ್ಥಾಪಕರಲ್ಲಿ ಒಬ್ಬರು. ನಾರಾಯಣ ಮೂರ್ತಿಯವರ ನಂತರ ಇವರು ಕಂಪನಿಯ ಎರಡನೇ ಸಿಇಓ ಆಗಿದ್ದು, 2002 ರಿಂದ 2007 ರವರೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾರಾಯಣ ಮೂರ್ತಿ-ನಿಲೇಕಣಿ ಕಾರ್ಯಾವಧಿಯಲ್ಲಿ ಕಂಪನಿಯು ಲಾಭವನ್ನು ಕಂಡಿತ್ತು. 2009 ರಲ್ಲಿ ಇನ್ಫೋಸಿಸ್’ನ್ನು ತೊರೆದು ಯುಐಡಿಎಐ ಚೇರ್.ಮನ್ ಆದರು.
ವಿಶಾಲ್ ಸಿಕ್ಕಾ-ನಾರಾಯಣ ಮೂರ್ತಿ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸಿಕ್ಕಾ ರಾಜಿನಾಮೆ ನೀಡಿ ಹೊರ ಬಂದರು. ಇದರಿಂದಾಗಿ ಬಿಕ್ಕಟ್ಟು ಉಂಟಾಗಿದ್ದು, ನಂದನ್ ನಿಲೇಕಣಿಯವರನ್ನು ವಾಪಸ್ ಕರೆ ತಂದರೆ ಸರಿಯಾಗಬಹುದು ಅನ್ನೋದು ಬಂಡವಾಳ ಹೂಡಿಕೆದಾರರ ಲೆಕ್ಕಾಚಾರವಾಗಿದೆ.
