ಶ್ರೀನಗರ :  ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್‌ ಯೋಧರನ್ನು ಹತ್ಯೆಗೈದ ಭಯೋತ್ಪಾದಕ ದಾಳಿಗೆ ವರ್ಚುವಲ್‌ ಸಿಮ್‌ಗಳನ್ನು ಬಳಸಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ದಾಳಿಯ ಹಿಂದಿರುವ ಜೈಷ್‌ ಎ ಮೊಹಮ್ಮದ್‌ ಸಂಘಟನೆಯು ಆತ್ಮಹತ್ಯಾ ಬಾಂಬರ್‌ ಆದಿಲ್‌ ದಾರ್‌ ಹಾಗೂ ದಾಳಿಯ ಮಾಸ್ಟರ್‌ಮೈಂಡ್‌ ಮುದಾಸಿರ್‌ ಖಾನ್‌ ಜೊತೆಗೆ ಈ ಸಿಮ್‌ ಮೂಲಕವೇ ಸಂಪರ್ಕ ಸಾಧಿಸಿತ್ತು ಎಂದೂ ತನಿಖೆಗಳಿಂದ ತಿಳಿದುಬಂದಿದೆ.

ಘಟನೆಯ ಸ್ಥಳ ಹಾಗೂ ಮುದಾಸಿರ್‌ ಖಾನ್‌ನನ್ನು ಹತ್ಯೆಗೈದ ಸ್ಥಳದಲ್ಲಿ ಪೊಲೀಸರು ಹಾಗೂ ಸೇನಾಪಡೆ ಸಾಕ್ಷ್ಯ ಕಲೆಹಾಕುವ ವೇಳೆ ವರ್ಚುವಲ್‌ ಸಿಮ್‌ ಬಳಕೆ ಮಾಡಿದ ಸಂಗತಿ ಬೆಳಕಿಗೆ ಬಂದಿದೆ. ಈ ಸಿಮ್‌ಗಳನ್ನು ಅಮೆರಿಕದ ಕಂಪನಿಗಳು ಪೂರೈಸುತ್ತವೆ. ಹೀಗಾಗಿ ಇವುಗಳನ್ನು ಖರೀದಿಸಿದರು ಯಾರು, ಸಿಮ್‌ಗಳ ನಂಬರ್‌ಗಳೇನು ಮತ್ತು ಯಾರು ಅವುಗಳಿಗೆ ಹಣ ಪಾವತಿ ಮಾಡಿದರು ಎಂಬುದನ್ನು ತಿಳಿಸುವಂತೆ ಶೀಘ್ರದಲ್ಲೇ ಅಮೆರಿಕಕ್ಕೆ ಭಾರತ ಸರ್ಕಾರ ಮನವಿ ಸಲ್ಲಿಸಲಿದೆ.

ವರ್ಚುವಲ್‌ ಸಿಮ್‌ ತಂತ್ರಜ್ಞಾನ ಇತ್ತೀಚಿನದಾಗಿದ್ದು, ಹೆಚ್ಚಾಗಿ ಆನ್‌ಲೈನ್‌ ವಂಚಕರು ಹಾಗೂ ಭಯೋತ್ಪಾದಕರೇ ಇದನ್ನು ಬಳಸುತ್ತಾರೆ. 26/11 ಮುಂಬೈ ದಾಳಿಯಲ್ಲಿ ವರ್ಚುವಲ್‌ ಸಿಮ್‌ ಅನ್ನು ಹೋಲುವ ವಾಯ್‌್ಸಓವರ್‌ ಇಂಟರ್ನೆಟ್‌ ಪ್ರೋಟೋಕಾಲ್‌ ಬಳಸಿ ಉಗ್ರರು ತಮ್ಮ ಮುಖ್ಯಸ್ಥರ ಜೊತೆ ಸಂಪರ್ಕ ಸಾಧಿಸಿದ್ದರು. ಇದಕ್ಕಾಗಿ ಪಾಕ್‌ ಆಕ್ರಮಿತ ಕಾಶ್ಮೀರದ ಜಾವೇದ್‌ ಇಕ್ಬಾಲ್‌ ಎಂಬಾತ ಇಟಲಿ ಮೂಲದ ಕಾಲ್‌ಫೋನಿಕ್ಸ್‌ ಎಂಬ ಕಂಪನಿಗೆ ವೆಸ್ಟರ್ನ್‌ ಯೂನಿಯನ್‌ ಮನಿ ಟ್ರಾನ್ಸ್‌ಫರ್‌ ಮೂಲಕ 229 ಡಾಲರ್‌ (ಸುಮಾರು 16 ಸಾವಿರ ರು.) ಹಣ ಪಾವತಿಸಿದ್ದ. ಭಾರತ ನೀಡಿದ ದೂರಿನ ಮೇಲೆ ಇಟಲಿ ಪೊಲೀಸರು ಕ್ರಮ ಕೈಗೊಂಡು ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು 2009ರಲ್ಲಿ ಬಂಧಿಸಿದ್ದರು.

ಏನಿದು ವರ್ಚುವಲ್‌ ಸಿಮ್‌?

ಸಾಮಾನ್ಯ ಮೊಬೈಲ್‌ ಫೋನ್‌ನಲ್ಲಿ ಬಳಸುವ ಸಿಮ್‌ ರೀತಿ ಇಲ್ಲಿ ಯಾವುದೇ ಸಿಮ್‌ ಇರುವುದಿಲ್ಲ. ಫೋನ್‌ ನಂಬರ್‌ +1ರಿಂದ ಶುರುವಾಗುತ್ತದೆ. ಇದರಲ್ಲಿ ಸಿಮ್‌ ಸಂಖ್ಯೆಯನ್ನು ಕಂಪ್ಯೂಟರ್‌ನಲ್ಲಿ ಸೃಷ್ಟಿಸಲಾಗುತ್ತದೆ. ನಂತರ ಬಳಕೆದಾರರು ಮೊಬೈಲ್‌ಗೆ ಆ್ಯಪ್‌ ಒಂದನ್ನು ಡೌನ್‌ಲೋಡ್‌ ಮಾಡಿಕೊಂಡು ನಂಬರ್‌ ಪಡೆಯುತ್ತಾರೆ. ಈ ನಂಬರನ್ನು ಕರೆ ಮಾಡಲು ಬಳಸಬಹುದು. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟೆಲಿಗ್ರಾಂ ಅಥವಾ ಟ್ವೀಟರ್‌ನಂತಹ ಸಾಮಾಜಿಕ ಜಾಲತಾಣಗಳಿಗೂ ಈ ನಂಬರ್‌ ಲಿಂಕ್‌ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾದ ವೆರಿಫಿಕೇಶನ್‌ ಕೋಡ್‌ ಮೊಬೈಲ್‌ಗೆ ಬರುತ್ತದೆ. ಈ ನಂಬರ್‌ ಬಳಸಿ ಕರೆ ಮಾಡಿದರೆ ಮೂಲ ಪತ್ತೆಹಚ್ಚುವುದು ಕಷ್ಟ.