ಪ್ರಧಾನಿ ನರೇಂದ್ರ ಮೋದಿ ಊಟದ ಫೋಟೋ ವೈರಲ್ | ಮೋದಿ ಊಟ ಮಾಡಲು ಇಷ್ಟೆಲ್ಲಾ ಪದಾರ್ಥಗಳಿರಬೇಕಾ? ಇದು ನಿಜನಾ?
ಬೆಂಗಳೂರು (ಸೆ. 10): ಪ್ರಧಾನಿ ನರೇಂದ್ರ ಮೋದಿ ತರಹೇವಾರಿ ಆಹಾರ ಪದಾರ್ಥಗಳನ್ನು ಒಳಗೊಂಡ ಭೋಜನ ಸವಿಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮುಂಬೈ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸಂಜಯ್ ನಿರುಪಮ್ ನರೇಂದ್ರ ಮೋದಿಯವರ ಭೋಜನದ ಫೋಟೋವೊಂದನ್ನು ಮೊದಲಿಗೆ ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ‘ಭ್ರಷ್ಟಾಚಾರವನ್ನು ನಿರ್ಮೂಲನೆಗೊ ಳಿಸಲು ಸಿದ್ಧತೆ’ ಎಂದು ವ್ಯಂಗ್ಯಾತ್ಮಕವಾಗಿ ಒಕ್ಕಣೆಯನ್ನೂ ಬರೆದಿದ್ದಾರೆ. ನಿರುಪಮ್ ಅವರ ಟ್ವೀಟ್ 2,200 ಬಾರಿ ಲೈಕ್ ಹಾಗೂ 600 ಬಾರಿ ರೀಟ್ವೀಟ್ ಆಗಿದೆ.
ಅನಂತರದಲ್ಲಿ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಪ್ರಧಾನಿ ಮೋದಿ ಭೋಜನದ ವೇಳೆ ತರಹೇವಾರಿ ಪದಾರ್ಥಗಳು ಟೇಬಲ್ ಮೇಲಿದ್ದವೇ ಎಂದು ಪರಿಶೀಲಿಸಿದಾಗ ಇದು ಫೋಟೋ ಶಾಪ್ ಮೂಲಕ ಎಡಿಟ್ ಮಾಡಿರುವ ಫೋಟೋ ಎಂಬುದು ಬಯಲಾಗಿದೆ.
ಬೂಮ್ ಈ ಚಿತ್ರದ ಜಾಡು ಹಿಡಿದು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದರ ಮೂಲ ಚಿತ್ರ ಪತ್ತೆಯಾಗಿದೆ. ವಾಸ್ತವವಾಗಿ 2008 ನವೆಂಬರ್ 12 ರಂದು ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ ಪತ್ರಕರ್ತರಿಗೆ ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ಭೋಜನ ಕೂಟದಲ್ಲಿ ಮೋದಿ ಊಟ ಮಾಡುತ್ತಿರುವ ಫೋಟೋ ಅದು. ಆದರೆ ಪ್ರಸ್ತುತ ವೈರಲ್ ಆಗಿರುವ ಫೋಟೋದಲ್ಲಿರುವಂತೆ ಮೂಲ ಫೋಟೋದಲ್ಲಿ ತರಹೇವಾರಿ ಪದಾರ್ಥಗಳೇನೂ ಇಲ್ಲ.
ಫೋಟೋಶಾಪ್ ಮೂಲಕ ಟೇಬಲ್ ಮೇಲೆ ತರಹೇವಾರಿ ಪದಾರ್ಥಗಳಿರುವಂತೆ ಎಡಿಟ್ ಮಾಡಲಾಗಿದೆ. ಕಳೆದ ವರ್ಷವೂ ಸಹ ಅದೇ ಫೋಟೋವನ್ನು ಬಳಸಿಕೊಂಡು ಮೋದಿ ದನದ ಮಾಂಸ ತಿನ್ನುತ್ತಿರುವಂತೆ ಫೋಟೋಶಾಪ್ ಮಾಡಲಾಗಿತ್ತು.
