ಆಯುಷ್ಮಾನ್ ಯೋಜನೆ ನೋಂದಣಿಗೆ 1324 ರು. ಪಾವತಿಸಬೇಕು!
ಜಗತ್ತಿನ ಅತಿ ದೊಡ್ಡ ಸಾರ್ವತ್ರಿಕ ಆರೋಗ್ಯ ವಿಮೆ ಎಂಬ ಹೆಗ್ಗಳಿಕೆ ಪಡೆದ ಆಯುಷ್ಮಾನ್ ಯೋಜನೆ ಭಾನುವಾರದಿಂದ ಅಧಿಕೃತವಾಗಿ ಆರಂಭ | ಆಯುಷ್ಮಾನ್ ಯೋಜನೆ ಫಲಾನುಭವಿಗಳು ನೋಂದಣಿಗೆ 1324 ರು.ವನ್ನು ಪಾವತಿಸಬೇಕಾ? ಏನಿದು ಹೊಸ ಸುದ್ದಿ?
ನವದೆಹಲಿ (ಸೆ. 25): ಜಗತ್ತಿನ ಅತಿ ದೊಡ್ಡ ಸಾರ್ವತ್ರಿಕ ಆರೋಗ್ಯ ವಿಮೆ ಎಂಬ ಹೆಗ್ಗಳಿಕೆ ಪಡೆದ ಆಯುಷ್ಮಾನ್ ಯೋಜನೆ ಭಾನುವಾರದಿಂದ ಅಧಿಕೃತವಾಗಿ ಆರಂಭಗೊಂಡಿದೆ. ಆದರೆ ಈ ಯೋಜನೆಯ ನೋಂದಣಿ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೀಗೆ ವೈರಲ್ ಆದ ಸಂದೇಶದಲ್ಲಿ, ‘ಆಯುಷ್ಮಾನ್ ಯೋಜನೆ (ಮೋದಿ ಕೇರ್)ನ ಫಲಾನುಭವಿಗಳು ಪ್ರತಿ ವರ್ಷ ತಮ್ಮ ಹೆಸರನ್ನು ನೋಂದಾಯಿಸಲು 1,324ರು.ವನ್ನು ನೋಂದಣಿಗೆ ಪಾವತಿಸಬೇಕು. ಅಂತಹ ಕುಂಟುಂಬಗಳಿಗೆ 5 ಲಕ್ಷದ ವರೆಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸುತ್ತದೆ’ ಎಂದು ಹೇಳಲಾಗಿದೆ. ಈ ಸಂದೇಶ ಸದ್ಯ ಫೇಸ್‌ಬುಕ್, ಟ್ವೀಟರ್, ವಾಟ್ಸ್‌ಆ್ಯಪ್‌ಗಳಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಆಯುಷ್ಮಾನ್ ಯೋಜನೆ ಫಲಾನುಭವಿಗಳು ನೋಂದಣಿಗೆ 1324 ರು.ವನ್ನು ಪಾವತಿಸಬೇಕೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿದೆ.
ವಾಸ್ತವವಾಗಿ ಮೋದಿ ಕೇರ್ ಯೋಜನೆಯ ನೋಂದಣಿಗೆ ಯಾವುದೇ ಹಣ ಪಾವತಿಸಬೇಕೆಂದಿಲ್ಲ. ಉಚಿತವಾಗಿ ನೋಂದಣಿ ಮಾಡಿಸಬಹುದು. ಅಲ್ಲದೆ ಹೀಗೆ ನೋಂದಣಿಗೆ ಹಣ ಪಾವತಿಸಬೇಕೆಂಬ ಸಂದೇಶ ವೈರಲ್ ಆಗುತ್ತಿದ್ದಂತೆ ಆರೋಗ್ಯ ಸಚಿವ ಜೆ ಪಿ ನಡ್ಡಾ ಅವರು ಪ್ರತಿಕ್ರಿಯಿಸಿ ಈ ಕುರಿತು ಸ್ಪಷ್ಟನೆ ನೀಡಿ, ‘ಈ ಯೋಜನೆಯು ಬಡವರಿಗಾಗಿಯೇ ಜಾರಿಗೊಳಿಸಿದ ಯೋಜನೆಯಾಗಿದ್ದು, ಅರ್ಹ ವ್ಯಕ್ತಿಗಳಿಗೆ ಉಚಿತವಾಗಿ ಲಭ್ಯವಿದೆ’ ಎಂದಿದ್ದಾರೆ. ಹಾಗಾಗಿ ಮೋದಿ ಕೇರ್ ಯೋಜನೆ ನೋಂದಣಿಗೆ ಹಣ ಪಾವತಿ ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು.
-ವೈರಲ್ ಚೆಕ್