ರಾಹುಲ್‌ ಗಾಂಧಿ ಫೋಟೋವನ್ನು ದುಬೈನ ವಿಶ್ವಪ್ರಸಿದ್ಧ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 2019 ಜನವರಿ 11ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಯುನೈಟೆಡ್‌ ಅರಬ್‌ ಎಮಿರೈಟ್ಸ್‌ಗೆ ಭೇಟಿ ನೀಡುತ್ತಿದ್ದು, ಅವರನ್ನು ಆಮಂತ್ರಿಸುವ ಸಲುವಾಗಿ ಬುಜ್‌ರ್‍ಕಲೀಫಾದ ಮೇಲೆ ರಾಹುಲ್‌ ಗಾಂದಿಯವರ ಚಿತ್ರವನ್ನು ಮೂಡಿಸಿ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ಧ್ವನಿವರ್ಧಕ ಮೊಳಗುವುದರೊಂದಿಗೆ ಬುರ್ಜ್ ಖಲೀಫಾದ ಮೇಲೆ ರಾಹುಲ್‌ ಗಾಂಧಿ ಚಿತ್ರವು ಮೂಡುವ ದೃಶ್ಯವಿದೆ. ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದೊಂದು ಸುಳುಸುದ್ದಿ, ಆ್ಯಪ್‌ವೊಂದನ್ನು ಬಳಸಿ ಈ ರೀತಿ ಎಡಿಟ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೂಮ್‌ ಸುದ್ದಿಸಂಸ್ಥೆ, ಬುಜ್‌ರ್‍ ಖಲೀಫಾದ ಪಬ್ಲಿಕ್‌ ರಿಲೇಶನ್‌ ಟೀಮ್‌ ಅನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆದಿದ್ದು, ಅವರು ಈ ಬಗ್ಗೆ ಗೊತ್ತೇ ಇಲ್ಲ ಎಂದಿದ್ದಾರೆ. ಜೊತೆಗೆ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗಲೂ ಈ ಕುರಿತ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ 2018 ಅಕ್ಟೋಬರ್‌ನಲ್ಲಿ ಬುಜ್‌ರ್‍ ಖಲೀಫಾದ ಮೇಲೆ ಮಹಾತ್ಮ ಗಾಂಧಿ ಫೋಟೋವನ್ನು ಪ್ರದರ್ಶಿಸಲಾಗಿತ್ತು ಎಂದು ಪತ್ತೆಯಾಗಿದೆಯಷ್ಟೆ. ಈ ವಿಡಿಯೋದಲ್ಲಿರುವ ‘Biugo’ ಎಂಬ ವಾಟರ್‌ಮಾರ್ಕ್ ಏನು ಎಂದು ಪರಿಶೀಲಿಸಿದಾಗ ಅದೊಂದು ಫೋಟೋ ಅಥಾವಾ ವಿಡಿಯೋ ಎಡಿಟಿಂಗ್‌ ಅಪ್ಲಿಕೇಶನ್‌ ಆಗಿದ್ದು, ಅದರಲ್ಲಿ ಬುಜ್‌ರ್‍ ಖಲೀಫಾ ಸೇರಿದಂತೆ ಹಲವು ಟೆಂಪ್ಲೇಟ್ಸ್‌ಗಳು ಲಭ್ಯವಿವೆ. ಆ ಟೆಂಪ್ಲೇಟ್‌ ಬಳಸಿ ಅದಕ್ಕೆ ಫೋಟೋವನ್ನು ಅಪ್‌ಲೋಡ್‌ ಮಾಡಿ ಎಡಿಟ್‌ ಮಾಡಿದರೆ ಈ ರೀತಿ ವಿಡಿಯೋವನ್ನು ಸೃಷ್ಟಿಸಬಹುದು. ಇದೂ ಕೂಡ ಅಂಥದ್ದೇ ವಿಡಿಯೋ.