ಖ್ಯಾತ ಕ್ರಿಕೆಟ್ ಆಟಗಾರರು, ಬಾಲಿವುಡ್‌ನ ನಟರು ಬಿಜೆಪಿಯನ್ನು ಸೇರುತ್ತಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇದು ನಿಜಾನಾ? ಇಲ್ಲಿದೆ ವಿವರ
ಖ್ಯಾತ ಕ್ರಿಕೆಟಿಗರು ಮತ್ತು ನಟರು ರಾಜಕೀಯ ಸೇರುವುದು ಹೊಸತೇನಲ್ಲ. ಹಾಗೆಯೇ ಇವರ ಹೆಸರುಗಳನ್ನು ಬಳಸಿಕೊಂಡು ಸುಳ್ಳುಸುದ್ದಿ ಹರಡಿ ರಾಜಕೀಯ ಪಕ್ಷಗಳು ಜನಪ್ರಿಯತೆ ಪಡೆಯಲು ಯತ್ನಿಸುವುದು, ಪ್ರಚಾರ ಗಿಟ್ಟಿಸಿಕೊಳ್ಳುವುದೂ ಹೊಸತೇನಲ್ಲ.
ಅದೇ ರೀತಿ ಸದ್ಯ ಖ್ಯಾತ ಕ್ರಿಕೆಟ್ ಆಟಗಾರರು, ಬಾಲಿವುಡ್‌ನ ನಟರು ಬಿಜೆಪಿಯನ್ನು ಸೇರುತ್ತಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಐ ಸಪೋರ್ಟ್ ಮೋದಿ ಜೀ’ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸನ್ನಿ ಡಿಯೋಲ್, ಗೌತಮ್ ಗಂಬೀರ್ ಕೇಸರಿ ಅಂಗವಸ್ತ್ರವನ್ನು ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿ, ‘ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಸನ್ನಿ ಡಿಯೋಲ್ ಮತ್ತು ಗೌತಮ್ ಗಂಭೀರ್ ಬಿಜೆಪಿ ಸೇರಿದ್ದಾರೆ’ ಎಂದು ಒಕ್ಕಣೆ ಬರೆದಿದೆ. ಜನವರಿ 31ರಂದು ಇದನ್ನು ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 9,300 ಬಾರಿ ಶೇರ್ ಆಗಿದೆ.

ಆದರೆ ನಿಜಕ್ಕೂ ಇವರೆಲ್ಲರೂ ಬಿಜೆಪಿ ಸೇರಿದ್ದಾರಾ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಈ ಸೆಲೆಬ್ರಿಟಿಗಳಾರೂ ಸಾರ್ವಜನಿಕವಾಗಿ ತಾವು ಬಿಜೆಪಿ ಸೇರಿದ್ದಾಗಿ ಪ್ರಕಟಿಸಿಲ್ಲ. ಆದಾಗ್ಯೂ ಗೌತಮ್ ಗಂಭೀರ್ ಮತ್ತು ಸನ್ನಿ ಡಿಯೋಲ್ ಈ ಹಿಂದೆ ಬಿಜೆಪಿ ಪ್ರರ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು. ಇದರ ಹೊರತಾಗಿ ವೈರಲ್ ಆಗಿರುವ ಕೊಹ್ಲಿ ಫೋಟೋ ಫೋಟೋಶಾಪ್ ಮೂಲಕ ಎಡಿಟ್ ಮಾಡಿರುವ ಚಿತ್ರ.
ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಪ್ರಧಾನಿ ಮೋದಿ ಅವರನ್ನು ವಿವಾಹ ಆರತಕ್ಷತೆಗೆ ಆಹ್ವಾನಿಸಲು ಪ್ರಧಾನಿ ಕಾರ್ಯಾಲಕ್ಕೆ ತೆರಳಿದ್ದ ಸಂದರ್ಭದಲ್ಲಿ ತೆಗೆಯಲಾದ ಚಿತ್ರವನ್ನು ಹೀಗೆ ಎಡಿಟ್ ಮಾಡಲಾಗಿದೆ. ಇನ್ನು ಸಚಿನ್ ತೆಂಡೂಲ್ಕರ್ ತಮ್ಮ 42ನೇ ಹುಟ್ಟುಹಬ್ಬದಂದು ಕೇಸರಿ ಕುರ್ತಾ ಧರಿಸಿ ಮುಂಬೈನ ಸಿದ್ಧಿವಿನಾಯಕ ದೇವಾಲಯಕ್ಕೆ ತೆರಳಿದ್ದ ಫೋಟೋವನ್ನು ಬಳಸಿಕೊಂಡು ಬಿಜೆಪಿ ಸೇರಿದ್ದಾರೆ ಎಂದು ವದಂತಿ ಹಬ್ಬಿಸಲಾಗುತ್ತಿದೆ.
