ನವದೆಹಲಿ[ಜ.25]: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಭಾವಚಿತ್ರವಿರುವ 200 ರು.ನೋಟನ್ನು ಬಿಡುಗಡೆ ಮಾಡಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಿಂದುತ್ವ ಡಾಟ್‌ ಇಸ್ಫೋ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಮೊದಲು ಪೋಸ್ಟ್‌ ಮಾಡಲಾಗಿದ್ದು 500 ಬಾರಿ ಶೇರ್‌ ಆಗಿದೆ. ಅಲ್ಲದೆ ‘ವಿ ಸಪೋರ್ಟ್‌ ರಾಮ ರಾಜ್ಯ’ ಎಂಬ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದ ಈ ಪೋಟೋವೂ 500 ಬಾರಿ ಶೇರ್‌ ಆಗಿದೆ.

ಆದರೆ ಈ ಸುದ್ದಿಯ ಸತ್ಯಾಸತ್ಯ ಏನು ಎಂದು ಪರಿಶೀಲಿಸಿದಾಗ 2018ರ ಡಿಸೆಂಬರ್‌ನಲ್ಲಿ ಮಾಜಿ ಪ್ರಧಾನಿ, ಭಾರತ ರತ್ನ ಪುರಸ್ಕೃತ ವಾಜಪೇಯಿ ಅವರ ಜ್ಞಾಪಕಾರ್ಥ ಪ್ರಧಾನಿ ಮೋದಿ 100ರು. ನಾಣ್ಯವನ್ನು ಬಿಡುಗಡೆ ಮಾಡಿದ್ದರು. ಡಿಸೆಂಬರ್‌ 24ರಂದು ವಾಜಪೇಯಿ ಜನ್ಮದಿನದ ಸ್ಮರಣಾರ್ತವಾಗಿ ನಡೆದ ಆ ಕಾರ್ಯಕ್ರಮಕ್ಕೆ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಅಮಿತ್‌ ಶಾ, ಸುಮಿತ್ರಾ ಮಹಾಜನ್‌ ಸೇರಿದಂತೆ ಹಲವು ಹಿರಿಯ ನಾಯಕರು ಭಾಗಿಯಾಗಿದ್ದರು.

ಹೀಗಿದೆ ಅಟಲ್ 100 ರೂ. ನಾಣ್ಯ: ಸಿಕ್ರೆ ಅದೇ ಪುಣ್ಯ!

ಈ ಸುದ್ದಿಯನ್ನೇ ತಪ್ಪಾಗಿ ಅರ್ಥೈಸಿ ವಾಜಪೇಯಿ ಚಿತ್ರವಿರುವ 200 ರು. ನೋಟನ್ನು ಬಿಡುಗಡೆ ಮಾಡಲಾಗಿದೆ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ. ಆದರೆ ಗಣ್ಯರೊಬ್ಬರ ಜ್ಞಾಪಕಾರ್ಥವಾಗಿ ನಾಣ್ಯ ಬಿಡುಗಡೆ ಮಾಡುವುದು ಇದೇ ಮೊದಲೇನಲ್ಲ. 1964ರಲ್ಲಿ ಮೊದಲ ಬಾರಿಗೆ ಜವಾಹರ್‌ ಲಾಲ್‌ ನೆಹರು ಅವರ ಜ್ಞಾಪಕಾರ್ಥವಾಗಿ ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು. ಅನಂತರ 1985ರಲ್ಲಿ ಇಂದಿರಾಗಾಂಧಿ ಅವರ ಜ್ಞಾಪಕಾರ್ಥವೂ ನಾಣ್ಯ ಬಿಡುಗಡೆ ಮಾಡಲಾಗಿತ್ತು. ಇದೇ ರೀತಿ ಗಾಂಧೀಜಿ, ರವೀಂದ್ರನಾಥ್‌ ಠಾಗೋರ್‌ ಅವರ ಸ್ಮರಣಾರ್ಥವೂ ನಾಣ್ಯಬಿಡುಗಡೆ ಮಾಡಲಾಗಿದೆ.