ನವದೆಹಲಿ[ಮೇ.11]: ಕ್ರಿಕೆಟಿಗರು, ಬಾಲಿವುಡ್‌ ನಟ ನಟಿಯರು ರಾಜಕೀಯ ಪಕ್ಷಗಳಿಗೆ ಸೇರುವುದು ಅಥವಾ ಅವರು ಯಾವುದೋ ರಾಜಕೀಯ ಪಕ್ಷಕ್ಕೆ ಸೇರಿದ್ದಾರೆಂದು ಸುದ್ದಿ ಹಬ್ಬಿಸುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಹೀಗೆ ಜನಪ್ರಿಯ ವ್ಯಕ್ತಿಗಳು ಯಾವುದೋ ಪಕ್ಷಕ್ಕೆ ಸೇರಿದ್ದಾರೆಂದು ಹೇಳಿ ಅವರ ಹಿಂಬಾಲಕರ ಮತಗಳನ್ನು ಸೆಳೆಯುವುದು ಇದರ ಹಿಂದಿನ ಉದ್ದೇಶವಾಗಿರುತ್ತದೆ.

ಈ ಹಿಂದೆ ದೀಪಿಕಾ ಪಡುಕೋಣೆ, ರಣ್‌ವೀರ್‌ ಸಿಂಗ್‌, ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ ಮುಂತಾದವರು ಬಿಜೆಪಿ ಸೇರಿದ್ದಾರೆಂದು ಸುದ್ದಿ ಹರಡಲಾಗಿತ್ತು. ಸದ್ಯ ಬಾಲಿವುಡ್‌ ನಟಿ ಕರೀನಾ ಕಪೂರ್‌ ಮತ್ತು ಸೈಫ್‌ ಅಲಿಖಾನ್‌ ದಂಪತಿಯ ಮಗ ತೈಮೂರ್‌ ಅಲಿ ಖಾನ್‌ ‘ನಮೋ ಅಗೇನ್‌‘ (ಮೋದಿ ಮತ್ತೊಮ್ಮೆ) ಎಂದು ಬರೆದ ಟಿ-ಶರ್ಟ್‌ ಧರಿಸಿ ಓಡಾಡುತ್ತಿರುವ ಫೋಟೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಪೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವ ಚಿತ್ರ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದಕ್ಕೆ ಸಂಬಂಧಪಟ್ಟಹಲವಾರು ಚಿತ್ರಗಳು ಲಭ್ಯವಿವೆ. ಅದರಲ್ಲಿ ತೈಮೂರ್‌ ಟಿ-ಶರ್ಟ್‌ ಮೇಲೆ ‘ಮತ್ತೊಮ್ಮೆ ಮೋದಿ’ ಎಂದು ಬರೆದಿಲ್ಲ.

ಅಲ್ಲದೆ ಇದೇ ಚಿತ್ರಗಳನ್ನು ಕರೀನಾ ಕಪೂರ್‌ ಖಾನ್‌ರ ಟ್ವೀಟರ್‌ ಖಾತೆಯಿಂದ ಟ್ವೀಟ್‌ ಮಾಡಲಾಗಿದ್ದು, ಕರೀನಾ ಕಪೂರ್‌ ತಮ್ಮ ಮಗ ತೈಮೂರ್‌ ಜೊತೆ ಬಂದು ಮತ ಚಲಾಯಿಸಿದರು ಎಂದು ಹೇಳಲಾಗಿದೆ. ಹೀಗಾಗಿ ನಮೋ ಅಗೇನ್‌ ಟೀಶರ್ಟ್‌ ಫೋಟೋ ನಕಲಿ ಎಂಬುದು ಸ್ಪಷ್ಟವಾಗುತ್ತದೆ.