ಎಟಿಎಂ ಬಳಕೆ ಹೇಗಿರಬೇಕೆಂಬ ಬಗ್ಗೆ ಆರ್‌ಬಿಐ ಪ್ರಕಟಣೆಯೊಂದನ್ನು ಹೊರಡಿಸಿದೆ. ಅದರಲ್ಲಿ ಪ್ರತಿಬಾರಿ ಎಟಿಎಂ ಒಳ ಹೋಗಿ ಮಶೀನ್‌ ಒಳಗೆ ಕಾರ್ಡ್‌ ಹಾಕುವ ಮೊದಲು ‘ಕ್ಯಾನ್ಸಲ್‌’ ಬಟನ್‌ಅನ್ನು ಎರಡು ಬಾರಿ ಒತ್ತಿ.

ಹೀಗೆ ಮಾಡಿದಾಗ ಕದೀಮರು ನಿಮ್ಮ ಪಿನ್‌ ಸಂಖ್ಯೆಯನ್ನು ಕದಿಯಲು ಮೊದಲೇ ಪ್ರಯತ್ನಿಸಿದ್ದರೆ ಅದು ಫಲಿಸುವುದಿಲ್ಲ. ಎಟಿಎಂ ಒಳಹೋದಾಗಲೆಲ್ಲಾ ಹೀಗೆ ಮಾಡುವುದನ್ನು ಮರೆಯದಿರಿ. ಮತ್ತು ಈ ಸಂದೇಶವನ್ನು ನಿಮ್ಮ ಸ್ನೇಹಿತರಿಗೂ ಕಳುಹಿಸಿ ಎಂದು ಹೇಳಲಾಗಿದೆ. ಸದ್ಯ ಈ ಸಂದೇಶವನ್ನು ಫೇಸ್‌ಬುಕ್‌, ಟ್ವೀಟರ್‌ ವಾಟ್ಸ್‌ಆ್ಯಪ್‌ಗಳಲ್ಲಿ ಶೇರ್‌ ಮಾಡಲಾಗುತ್ತಿದೆ.

ಆದರೆ ನಿಜಕ್ಕೂ ಆರ್‌ಬಿಐ ಇಂಥದ್ದೊಂದು ಪ್ರಕಟಣೆಯನ್ನು ಹೊರಡಿಸಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಅಲ್ಲದೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಇಂತಹ ಯಾವುದೇ ಪ್ರಕಟಣೆಯನ್ನೂ ಹೊರಡಿಸಿಲ್ಲ. ಬೂಮ್‌ ಲೈವ್‌ ಸುದ್ದಿ ಸಂಸ್ಥೆ ಇದು ಸುಳ್ಳುಸುದ್ದಿ ಎಂದು 2018ರಲ್ಲೇ ಪತ್ತೆಹಚ್ಚಿತ್ತು.

ಈ ಸಂದರ್ಭದಲ್ಲಿ ಬೂಮ್‌ಲೈವ್‌ ಆರ್‌ಬಿಐ ಸುದ್ದಿ ಮೂಲಗಳಿಂದ ಸ್ಪಷ್ಟನೆ ಪಡೆದಿತ್ತು. ಆಗ ಹೆಸರು ಹೇಳಲು ಇಚ್ಛಿಸದ ಅವರು, ‘ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿರುವ ಸಂದೇಶ ಸುಳ್ಳು. ಕೇಂದ್ರ ಬ್ಯಾಂಕ್‌ ಈ ಪ್ರಕಟಣೆಯನ್ನು ಹೊರಡಿಸಿಯೇ ಇಲ್ಲ’ ಎಂದಿದ್ದರು.

ಸುದ್ದಿಯ ಮೇಲೆ ಜನರಿಗೆ ನಂಬಿಕೆ ಬರಲಿ ಎನ್ನುವ ಕಾರಣಕ್ಕಾಗಿ ಆರ್‌ಬಿಐ ಹೆಸರನ್ನು ಸೇರಿಸಲಾಗಿದೆ. ಕ್ಯಾನ್ಸಲ್‌ ಬಟನ್‌ ಒತ್ತುವುದರಿಂದ ಪಿನ್‌ ನಂಬರ್‌ ಕದಿಯಲು ಸಾಧ್ಯವಿಲ್ಲ ಎನ್ನುವುದು ಸಂಪೂರ್ಣ ಸುಳ್ಳು. ಕ್ಯಾನ್ಸಲ್‌ ಬಟನ್‌ ಒತ್ತದೇ ನೇರವಾಗಿ ನಗದು ವರ್ಗಾವಣೆ ಮಾಡಿಕೊಂಡರೂ ಯಾವುದೇ ತೊಂದರೆಯಾಗುವುದಿಲ್ಲ. 

- ವೈರಲ್ ಚೆಕ್