ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಹಂತಕ ನಾತೂರಾಮ್‌ ಗೋಡ್ಸೆ ಪ್ರತಿಮೆಗೆ ಹಾರ ಹಾಕಿ ಗೌರವಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಪ್ರಜ್ಞಾ ಗೂಡ್ಸೆ ದೇಶಪ್ರೇಮಿ ಎನ್ನುತ್ತಾರೆ, ಡಿವೈಡರ್‌ ಇನ್‌ ಚೀಪ್‌ ಗೂಡ್ಸೆಗೆ ನಮನ ಸಲ್ಲಿಸುತ್ತಾರೆ. ಏಕೆಂದರೆ ಈಗ ಭಯೋತ್ಪಾದಕರೆಲ್ಲಾ ದೇಶಭಕ್ತರಾಗುತ್ತಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ.

ಬೋಪಾಲ್‌ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಠಾಕೂರ್‌ ನಾತೂರಾಮ ಗೋಡ್ಸೆ ಒಬ್ಬ ದೇಶಭಕ್ತ ಎಂದು ಹೇಳಿಕೆ ನೀಡಿದ ಬಳಿಕ ಮೋದಿ ಕುರಿತ ಈ ಸುದ್ದಿಗಳು ವೈರಲ್‌ ಆಗುತ್ತಿವೆ.

ನಿಜಕ್ಕೂ ಮೋದಿ ಗೋಡ್ಸೆಗೆ ಹಾರಹಾಕಿ ನಮನ ಸಲ್ಲಿಸಿದ್ದರೇ ಎಂದು ಬೂಮ್‌ಲೈವ್‌ ಸುದ್ದಿ ಸಂಸ್ಥೆ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೈರಲ್‌ ಆಗಿರುವ ಚಿತ್ರಕ್ಕೆ ಸಾಮ್ಯತೆ ಇರುವ, ಸುದ್ದಿ ಮಾಧ್ಯಮವೊಂದರಲ್ಲಿ 2017ರಲ್ಲಿ ಪ್ರಕಟವಾಗಿರುವ ಫೋಟೋ ಪತ್ತೆಯಾಗಿದೆ.

ಅಲ್ಲದೆ ಇಂಡಿಯಾ ಟುಡೇ ವಾಹಿನಿಯಲ್ಲೂ ಈ ಬಗ್ಗೆ ವರದಿಯಾಗಿದ್ದು ಅದರಲ್ಲಿ, ಬಿಜೆಪಿಯ 37ನೇ ಸಂಸ್ಥಾಪನಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಹಿರಿಯ ಸಚಿವರು ನವದೆಹಲಿಯಲ್ಲಿರುವ ಬಿಜೆಪಿ ಮುಖ್ಯಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ದೀನ್‌ ದಯಾಳ್‌ ಉಪಾಧ್ಯಾಯ್‌ ಅವರ ಪ್ರತಿಮೆಗೆ ಹಾರ ಹಾಕಿ ನಮನ ಸಲ್ಲಿಸಲಾಯಿತು ಎಂದಿದೆ. ಸದ್ಯ ಇದೇ ಫೋಟೋವನ್ನು ಬಳಸಿಕೊಂಡು ಸುಳ್ಳು ಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್