ನವದೆಹಲಿ[ಜ.07]: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೆಸರಿನಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯ 6 ಸ್ಕಾಲರ್‌ಶಿಪ್‌ ಆರಂಭಿಸಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂಡಿಯಾ ಪೋಸ್ಟ್‌ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ಇದನ್ನು ಮೊದಲಿಗೆ ಪೋಸ್ಟ್‌ ಮಾಡಿದ್ದು ಅದು 413ಬಾರಿ ಶೇರ್‌ ಆಗಿದೆ.

ಈ ಹಿಂದೆಯೂ ಕೂಡ ‘ 800 ವರ್ಷ ಹಳೆಯದಾದ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯ ಡಾ. ನರೇಂದ್ರ ಮೋದಿ ಹೆಸರಲ್ಲಿ ಸ್ಕಾಲರ್‌ಶಿಪ್‌ ಆರಂಭಿಸುತ್ತಿದೆ. ಇದು ಜಗತ್ತು ಮನಮೋಹನ್‌ಸಿಂಗ್‌ ಅವರ ಪ್ರಾಮುಖ್ಯತೆಯನ್ನು ಅರಿತಿರುವ ಸಂಕೇತ. ಇದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯ’ ಎಂದು ಹೇಳಲಾಗಿತ್ತು. ಆದರೆ ನಿಜಕ್ಕೂ ಆಕ್ಸ್‌ಫರ್ಡ್‌ ಮನಮೋಹನ್‌ ಸಿಂಗ್‌ ಹೆಸರಲ್ಲಿ ವಿದ್ಯಾರ್ಥಿವೇತನ ಆರಂಭಿಸಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

2009ರಲ್ಲಿ ಕೇಂಬ್ರಿಡ್ಜ್‌ ಯೂನಿವರ್ಸಿಟಿ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಹೆಸರಲ್ಲಿ ಸ್ಕಾಲರ್‌ಶಿಪ್‌ ಪ್ರಾರಂಭಿಸಿದ್ದಾಗ ಸುದ್ದಿ ಮಾಧ್ಯಮವೊಂದು ವರದಿ ಮಾಡಿತ್ತು. ಕೇಂಬ್ರಿಡ್ಜ್‌ ಯೂನಿವರ್ಸಿಯ ಅಧಿಕೃತ ವೆಬ್‌ಸೈಟ್‌ನಲ್ಲೂ ಆ ಬಗ್ಗೆ ಸ್ಪಷ್ಟೀಕರಣ ಇತ್ತು. ಸದ್ಯ ಅದೇ ರೀತಿ 800 ವರ್ಷ ಹಳೆಯದಾದ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯವೂ ಸಿಂಗ್‌ ಹೆಸರಲ್ಲಿ ವಿದ್ಯಾರ್ಥಿ ವೇತನ ಆರಂಭಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.