ಜಪಾನ್ ಸರ್ಕಾರ ಮೈಕ್ರೋ ಓವನ್‌ಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ಮುಂದಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ. 

ವಾಟ್ಸ್ ಆ್ಯಪ್‌ಗಳಲ್ಲಿ ವೈರಲ್ ಆಗಿರುವ ಸಂದೇಶ ಹೀಗಿದೆ, ‘ಈ ವರ್ಷದ ಅಂತ್ಯದೊಳಗೆ ದೇಶದಲ್ಲಿರುವ ಎಲ್ಲ ಮೈಕ್ರೋವೇವ್ ಓವನ್ಗಳನ್ನು ಹೊರಹಾಕಲು ಜಪಾನ್ ಸರ್ಕಾರ ನಿರ್ಧರಿಸಿದೆ.

ಸರ್ಕಾರದ ಆದೇಶ ಉಲ್ಲಂಘಿಸಿ ಓವನ್ ಹೊಂದಿದ್ದರೆ ಅವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ’ ಎಂದು ಹೇಳಲಾಗಿದೆ. ಕಳೆದ 20 ವರ್ಷಗಳಿಂದ ಅಲ್ಲಿನ ಜನರ ಆರೋಗ್ಯದ ಮೇಲೆ ಈ ಓವನ್ಗಳು ದುಷ್ಪರಿಣಾಮ ಬೀರಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಹೇಳಲಾಗಿದೆ. ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇಂಥದ್ದೇ ಸಂದೇಶ 2018 ರಿಂದಲೂ ಸೋಷಿಯಲ್
ಮೀಡಿಯಾಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ.

ಅಮೆರಿಕದ ಫ್ಯಾಕ್ಟ್‌ಚೆಕ್ಕಿಂಗ್ ವೆಬ್‌ಸೈಟ್ ‘ಸ್ನೋಪ್ಸ್’ ಜಪಾನ್ ಮೈಕ್ರೋವೇವ್ ಓವನ್‌ಗಳನ್ನು ಬ್ಯಾನ್ ಮಾಡುತ್ತಿದೆ ಎಂಬ ಸುದ್ದಿ ಆರಂಭವಾಗಿದ್ದು, ರಷ್ಯಾದ ವಿಡಂಬನಾತ್ಮಕ ವೆಬ್ಸೈಟ್‌ನಲ್ಲಿ ಎಂದು ಪತ್ತೆಹಚ್ಚಿದೆ. ಈ ರಷ್ಯನ್ ವೆಬ್‌ಸೈಟ್‌ನಲ್ಲಿ 2019 ಮಾರ್ಚ್ 3 ರಂದು ಪ್ರಕಟವಾದ ಲೇಖನವೊಂದರಲ್ಲಿ ‘ಜಪಾನ್ ಕೊನೆಗೂ ಮೈಕ್ರೋವೇವ್ ಓವನ್‌ಗಳನ್ನು 2020 ರ ಒಳಗೆ ನಿಷೇಧಿಸಲು ಮುಂದಾಗಿದೆ’ ಎಂದು ಬರೆಯಲಾಗಿದೆ.

ಅದರೆ ಈ ಲೇಖನದ ಕೆಳಭಾಗದಲ್ಲಿ, ‘ಈ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಯಾವುದೇ ಲೇಖನಗಳು ಸತ್ಯಾಂಶ ಆಧಾರಿತವಲ್ಲ’ ಎಂದು ಬರೆಯಲಾಗಿದೆ. ಈ ಲೇಖನದಲ್ಲಿ ಹೇಳಿರುವ ಅಂಶಗಳೇ ವೈರಲ್ ಆಗಿರುವ ಸಂದೇಶದಲ್ಲೂ ಇದೆ. ಅಲ್ಲಿಗೆ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟ.

- ವೈರಲ್ ಚೆಕ್