5ಜಿ ತಂತ್ರಜ್ಞಾನ ಸಂಪರ್ಕದ ಪ್ರಥಮ ಪ್ರಯೋಗದಿಂದಾಗಿ ನೆದರ್‌ಲ್ಯಾಂಡ್‌ನಲ್ಲಿ 297 ಪಕ್ಷಿಗಳು ಮೃತಪಟ್ಟಿವೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತದಲ್ಲಿಯೂ ಈ ಸಂದೇಶ ವ್ಯಾಪಕವಾಗಿ ಹರಿದಾಡುತ್ತಿದೆ. ಇತ್ತೀಚೆಗೆ ಭಾರತದಲ್ಲಿ ರಜನಿಕಾಂತ್‌ ಅವರ 2.0 ಸಿನಿಮಾ ಬಿಡುಗಡೆಯಾಗಿದ್ದ, ಇದು ಸೆಲ್‌ಫೋನ್‌ಗಳ ರೇಡಿಯೇಶನ್‌ಗಳು ಪಕ್ಷಿಗಳ ಮೇಲೆ ಉಂಟುಮಾಡುವ ಪರಿಣಾಮದ ಕಥೆಯನ್ನಾಧರಿಸಿದೆ. ಈ ಸಿನಿಮಾದ ಬಳಿಕ ಈ ಸಂದೇಶ ಭಾರತದಲ್ಲಿ ವೈರಲ್‌ ಆಗಿದೆ. ಹಲವು ಸುದ್ದಿ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿವೆ. ಆದರೆ ನಿಜಕ್ಕೂ 5ಜಿ ಪ್ರಯೋಗದಿಂದ ನೆದರ್‌ಲ್ಯಾಂಡ್‌ನಲ್ಲಿ ಪಕ್ಷಿಗಳು ಮೃತಪಟ್ಟವೇ ಎಂದು ಪರಿಶೀಲಿಸಿದಾಗ ಪಕ್ಷಿಗಳ ಸಾವಿಗೂ, 5ಜಿಗೂ ಸಂಬಂಧವೇ ಇಲ್ಲ ಎಂದು ನೆದರ್‌ಲ್ಯಾಂಡ್‌ ಮೂಲದ ಸುದ್ದಿ ಸಂಸ್ಥೆ ಡಚ್‌ನ್ಯೂಸ್‌ ಸ್ಪಷ್ಟಪಡಿಸಿದೆ.

ವೈರಲ್ ಚೆಕ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಡಚ್‌ನ್ಯೂಸ್‌ ಸುದ್ದಿಸಂಸ್ಥೆಯ ನ್ಯೂಸ್‌ ಎಡಿಟರ್‌, ರಾಬಿನ್‌ ಪಾಸ್ಕೋಯ್‌ ಅವರು ‘ಕ್ವಿಂಟ್‌’ಗೆ ಪ್ರತಿಕ್ರಿಯಿಸಿದ್ದು, ‘ಇದೊಂದು ಸುಳ್ಳುಸುದ್ದಿ. ಪಕ್ಷಿಗಳು ಬಹುಶಃ ವಿಷಾಹಾರ ಸೇವಿಸಿ ಮೃತಪಟ್ಟಿರಬಹುದು. ಈ ಬಗ್ಗೆ ಇನ್ನೂ ಪರೀಕ್ಷೆ ನಡೆಯುತ್ತಿದೆ’ ಎಂದಿದ್ದಾರೆ. ಮೂಲಗಳ ಪ್ರಕಾರ ನವೆಂಬರ್‌ 5ರಿಂದಲೂ 5ಜಿ ಎಕ್ಸಪೇರಿಮೆಂಟ್‌ನಿಂದಾಗಿ ನೆದರ್‌ಲ್ಯಾಂಡ್‌ನಲ್ಲಿ ನೂರಾರು ಪಕ್ಷಿಗಳು ಸತ್ತಿವೆ’ ಎಂಬ ಸಂದೇಶ ಹರಿದಾಡುತ್ತಿದೆ. ವಾಸ್ತವವಾಗಿ ಇದೇ ವರ್ಷ ಅಕ್ಟೋಬರ್‌ನಲ್ಲಿ ಹೈಜಿನ್‌ಸ್ಫಾರ್ಕ್ ಎಂಬಲ್ಲಿ ಇದ್ದಕ್ಕಿದ್ದಂತೇ ಹಲವು ಪಕ್ಷಿಗಳು ಮೃತಪಟ್ಟಿದ್ದವು. ಆ ಘಟನೆ ಬಳಿಕ ಅಲ್ಲಿನ ಸ್ಥಳೀಯ ಸರ್ಕಾರ ಆ ಪ್ರದೇಶಕ್ಕೆ ನಾಯಿಗಳನ್ನು ನಿಷೇಧಿಸಿದ್ದು, ಈ ಬಗ್ಗೆ ಇನ್ನೂ ತನಿಖೆಯಾಗುತ್ತಿದೆ. ಹಾಗಾಗಿ 5ಜಿಯಿಂದ ಪಕ್ಷಿಗಳು ಮೃತಪಟ್ಟಿವೆ ಎಂಬ ಸುದ್ದಿ ಸುಳ್ಳು.