ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಎಷ್ಟುಜನ ಸೇರುತ್ತಾರೆ ಎಂಬುದು ಪಕ್ಷದ ಸೋಲು ಗೆಲುವಿಗೆ ಮಾನದಂಡ ಎಂದೇ ಪರಿಗಣಿಸುತ್ತಿರುವ ಸಂದರ್ಭ ಇದು. ಹಾಗಾಗಿಯೇ ಈ ಕುರಿತ ಸುಳ್ಳುಸುದ್ದಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಮತದಾರರ ಮನ ಸೆಳೆಯಲು ಯತ್ನಿಸುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಸದ್ಯ ಅಂತದ್ದೇ ಸುಳ್ಳುಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಅದೇನೆಂದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಿಬಿಐ ನಡುವೆ ಉಂಟಾದ ಜಟಾಪಟಿ ಬಳಿಕ ಮೋದಿ ಪಶ್ಚಿಮ ಬಂಗಾಳದಲ್ಲಿ ಸಮಾವೇಶ ನಡೆಸಿದ್ದರು. ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಮೋದಿಗೆ ಬೆಂಬಲ ಸೂಚಿಸಿದರು ಎಂಬ ಅರ್ಥ ನೀಡುವ ಫೋಟೋಗಳು ವೈರಲ್‌ ಆಗುತ್ತಿವೆ.

‘ನರೇಂದ್ರ ಮೋದಿ ಫಾರ್‌ ಪಿಎಂ’ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ಈ ಫೋಟೋಗಳನ್ನು ಪೋಸ್ಟ್‌ ಮಾಡಿ, ‘ಜನರ ಕೊರತೆಯಿಂದಾಗಿ ಸಮಾವೇಶಗಳನ್ನು ಮೊಟಕುಗೊಳಿಸುದೇ ಹೆಚ್ಚು. ಆದರೆ ಮೋದಿ ಬಂಗಾಳ ಸಮಾವೇಶದಲ್ಲಿ ಅತಿ ಹೆಚ್ಚು ಜನ ಸೇರಿದ್ದರಿಂದ ಪ್ರಧಾನಿಯವರು ತಮ್ಮ ಭಾಷಣವನ್ನು ಮೊಟಕು ಗೊಳಿಸಬೇಕಾಯಿತು’ ಎಂಬ ಒಕ್ಕಣೆ ಬರೆಯಲಾಗಿದೆ. ಜೊತೆಗೆ ‘ಹೌ ದ ಜೋಶ್‌’ ಎಂದು ಹ್ಯಾಶ್‌ಟ್ಯಾಗ್‌ ಹಾಕಿ ಶೇರ್‌ ಮಾಡಲಾಗುತ್ತಿದೆ.

 

ಆದರೆ ನಿಜಕ್ಕೂ ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ರಾರ‍ಯಲಿಯಲ್ಲಿ ಅಗಾಧ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರೇ ಎಂದು ಪರಿಶೀಲಿಸಿದಾಗ, ಈ ಫೋಟೋಗಳು ಪಶ್ಚಿಮ ಬಂಗಾಳದ್ದೇ ಅಲ್ಲ, ಬೇರೆ ಬೇರೆ ರಾಜ್ಯಗಳ ರಾರ‍ಯಲಿ ಫೋಟೋ ಇವು ಎಂಬುದು ಪತ್ತೆಯಾಗಿದೆ. ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಮೊದಲನೇ ಚಿತ್ರವು 2014ರ ಮೋದಿ ರಾರ‍ಯಲಿಯದ್ದು ಎಂದು ತಿಳಿದುಬಂದಿದೆ. ಇನ್ನು ಎರಡನೇ ಚಿತ್ರವು ಎಲ್ಲಿಯದ್ದು ಎಂದು ತಿಳಿದಿಲ್ಲ. ಆದರೆ ಮೂರನೇ ಚಿತ್ರವು ನರೇಂದ್ರ ಮೋದಿ ಅವರ 2014ರ ಕರ್ನಾಟಕ ಸಮಾವೇಶ ಎಂಬುದು ಸ್ಪಷ್ಟವಾಗಿದೆ.