ನವದೆಹಲಿ[ಏ.15]: ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರು ಧರಿಸುವ ಹಸಿರು ಟೋಪಿ ಧರಿಸಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಒಟ್ಟಿಗೆ ಕುಳಿತು ಭೋಜನ ಮಾಡುತ್ತಿರುವ ಫೋಟೋವೊಂದು ಭಾರೀ ವೈರಲ್‌ ಆಗುತ್ತಿದೆ. ಈ ಪೋಟೋದೊಂದಿಗೆ ಬೇರೇ ಬೇರೆ ರೀತಿಯ ಒಕ್ಕಣೆ ಬರೆದು ಶೇರ್‌ ಮಾಡಲಾಗುತ್ತಿದೆ.

ವಾಟ್ಸ್‌ಆ್ಯಪ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದನ್ನು ಪಾಕಿಸ್ತಾನ ಏಕೆ ಬಯಸುತ್ತಿದೆ ಎಂದು ಅರ್ಥವಾಯಿತೇ’ ಎಂದರೆ ಇನ್ನೊಂದೆಡೆ, ‘ಈ ಸ್ನೇಹದ ಹಿಂದೆ ಬಲವಾದ ಗುಟ್ಟಿದೆ’ ಎಂದು ಹೇಳಲಾಗಿದೆ. ಸುಜಿತ್‌ ಯಾದವ್‌ ಎಂಬ ಫೇಸ್‌ಬುಕ್‌ ಖಾತೆಯಿಂದ ಮೊಟ್ಟಮೊದಲಬಾರಿಗೆ ಈ ಪೋಟೋ ಪೋಸ್ಟ್‌ ಆಗಿದ್ದು, ಅದು 3.2ಲಕ್ಷ ಬಾರಿ ಶೇರ್‌ ಆಗಿದೆ.

ಆದರೆ ನಿಜಕ್ಕೂ ಇಮ್ರಾನ್‌ ಜೊತೆಗೆ ಮೋದಿ ಭೋಜನೆ ಮಾಡಿದ್ದರೇ ಎಂದು ಪರಿಶೀಲಿಸಿದಾಗ ಇದು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವ ಚಿತ್ರ ಎಂದು ತಿಳಿದುಬಂದಿದೆ. ದಿ ಕ್ವಿಂಟ್‌ ಸುದ್ದಿ ಸಂಸ್ಥೆ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಮೂಲ ಚಿತ್ರದಲ್ಲಿರುವುದು ಇಮ್ರಾನ್‌ ಎರಡನೇ ಪತ್ನಿ ರೆಹಮಾನ್‌ ಖಾನ್‌ ಎಂದು ತಿಳಿದುಬಂದಿದೆ.

ಆ ಪೋಟೋದೊಂದಿಗೆ, ಪಿಎಂ ಮೋದಿ 2013 ನವೆಂಬರ್‌ 13ರಂದು ಅಂದರೆ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಸಹಬೋಜನ ಏರ್ಪಡಿಸಿದ್ದರು. ಆ ಸಂದರ್ಭದ ಫೋಟೋಗೆ ಹಸಿರು ಬಣ್ಣದ ಟೊಪ್ಪಿ ಧರಿಸಿರುವಂತೆ ಎಡಿಟ್‌ ಮಾಡಿ ಇಮ್ರಾನ್‌ ಫೋಟೋದೊಂದಿಗೆ ಸಂಕಲಿಸಿ ಪೋಸ್ಟ್‌ ಮಾಡಲಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.