ಇಂಡಿಗೋ ವಿಮಾನಯಾನ ಸಂಸ್ಥೆ ತನ್ನ 12ನೇ ವಾರ್ಷಿಕೋತ್ಸದ ಸಂಭ್ರಮದಲ್ಲಿ ತನ್ನ ಗ್ರಾಹಕರಿಗೆ ಉಚಿತವಾಗಿ ಎರಡೆರಡು ಟಿಕೆಟ್‌ ನೀಡುತ್ತಿದೆ ಎಂಬ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಮಾನಯಾನಕ್ಕೆ ಉಚಿತ ಟಿಕೆಟ್‌ ಪಡೆದುಕೊಳ್ಳಲು ಈ ಲಿಂಕ್‌ ಒತ್ತಿ ಎಂದೂ ಕೂಡ ಹೇಳಲಾಗಿದೆ.

ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದಾದ ಇಂಡಿಗೋ ಏರ್‌ಲೈನ್ಸ್‌ ಎಂಬ ವೆಬ್‌ಪೇಜ್‌ ತೆರೆದುಕೊಳ್ಳುತ್ತದೆ. ಅದರಲ್ಲಿ ಇಂಡಿಗೋ ಏರ್‌ಲೈನ್ಸ್‌ ಕುಟುಂಬದ ಪ್ರತಿಯೊಬ್ಬರಿಗೂ 2 ಉಚಿತ ಟಿಕೆಟ್‌ ನೀಡುತ್ತಿದೆ. ಸದ್ಯ ಇಷ್ಟುಟಿಕೆಟ್‌ಗಳು ಮಾತ್ರ ಬಾಕಿ ಇವೆ ಎನ್ನಲಾಗಿದೆ. ಜೊತೆಗೆ ನೀವು ಈ ಹಿಂದೆ ಇಂಡಿಗೋದಲ್ಲಿ ಪ್ರಯಾಣಿಸಿದ್ದೀರಾ ಎಂಬ ಪ್ರಶ್ನೆಯನ್ನೂ ಕೇಳಲಾಗಿದೆ. ಪ್ರಶ್ನೆಗೆ ಉತ್ತರಿಸಿದ ಬಳಿಕ ಟಿಕೆಟ್‌ ಪಡೆಯುವ ವಿಧಾನ ವಿವರಿಸಲಾಗಿದೆ. ಅದರಲ್ಲಿ ಮೊದಲನೆಯನೆಯದು; ಈ ಸಂದೇಶವನ್ನು ವಾಟ್ಸ್‌ಆ್ಯಪ್‌ನ 5 ಗ್ರೂಪ್‌ಗೆ ಕಳಿಸುವುದು. ಎರಡನೆಯದು; ವಿಳಾಸ ಭರ್ತಿ, ಕೊನೆಯಲ್ಲಿ 24-48ಗಂಟೆಯೊಳಗಾಗಿ ನಿಮ್ಮ ಟಿಕೆಟ್‌ ಇ-ಮೇಲ್‌ ಮಾಡಲಾಗುತ್ತದೆ ಎನ್ನಲಾಗಿದೆ.

ಆದರೆ ನಿಜಕ್ಕೂ ಇಂಡಿಗೋ ಏರ್‌ಲೈನ್ಸ್‌ ಉಚಿತವಾಗಿ ಟಿಕೆಟ್‌ ನೀಡುತ್ತಿದೆಯೇ ಅಂದರೆ ಇಲ್ಲ. ಇದೊಂದು ವಾಟ್ಸ್‌ಆ್ಯಪ್‌ ಸ್ಕ್ಯಾ‌ಮ್‌. ನೀವು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಈ ಸಂದೇಶ ಕಳುಹಿಸದೇ ಇದ್ದಲ್ಲಿ ವೆಬ್‌ಸೈಟ್‌ನಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂಬ ಎಚ್ಚರಿಗೆ ಬರುತ್ತದೆ. ಅಲ್ಲಿಗೆ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟ. ಜೊತೆಗೆ ಯುಆರ್‌ಎಲ್‌ ಲಿಂಕ್‌ ಪರಿಶೀಲಿಸಿದಾಗ ಇದು ನಕಲಿ ವೆಬ್‌ಸೈಟ್‌ ಎಂಬುದು ಪತ್ತೆಯಾಗಿದೆ. ಈ ರೀತಿಯ ನಕಲಿ ವೆಬ್‌ಸೈಟ್‌ಗಳ ಲಿಂಕ್‌ಗಳಿಂದ ಹಣವೇನೂ ನಷ್ಟವಾಗುವುದಿಲ್ಲ. ಬದಲಿಗೆ ನಮ್ಮ ಮೊಬೈಲ್‌ ನಂಬರ್‌ಗಳನ್ನು ವಂಚಕರು ಪಡೆದು ಅದನ್ನು ಟೆಲಿ ಮಾರ್ಕೆಟರ್‌ಗಳಿಗೆ ಮಾರಾಟ ಮಾಡುತ್ತಾರೆ. ಅಲ್ಲಿಂದ ಅನಗತ್ಯ ಕರೆಗಳು ಬರತೊಡಗುತ್ತವೆ.