ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳಿಗೆ 10 ಸಾವಿರ ಹಣವನ್ನು ನೀಡಲಿದೆ ಎಂದು ಸುದ್ದಿಯೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಗಮನಿಸಿದಾಗ ತಿಳಿದು ಬಂದಿದ್ದೇ ಬೇರೆ. 

ಪ್ರಧಾನಿ ನರೇಂದ್ರ ಮೋದಿ ಹೆಣ್ಣುಮಕ್ಕಳ ಜೀವನ ಸುಧಾರಣೆ ಯೋಜನೆ-2018 ಅನ್ನು ಜಾರಿಗೊಳಿಸಿದ್ದಾರೆ. ಈ ಯೋಜನೆಯ ಪ್ರಕಾರ 1-18 ವರ್ಷದೊಳಗಿನ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ 10 ಸಾವಿರ ರು. ಚೆಕ್‌ ನೀಡುತ್ತಿದೆ. ಇದೇ ಅಗಸ್ಟ್‌ 15, 2018ರ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂಬಂತಹ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸಂದೇಶದ ಕೆಳಗೆ ನೋಂದಣಿ ಮಾಡಲು ಲಿಂಕ್‌ ನೀಡಲಾಗಿದೆ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿದಾಗ ಅರ್ಜಿಯೊಂದು ತೆರದುಕೊಳ್ಳುತ್ತದೆ. ಅದರಲ್ಲಿ ಹೆಸರು, ಅರ್ಜಿದಾರರ ಹೆಸರು, ವಯಸ್ಸು ಮತ್ತು ಯಾವ ರಾಜ್ಯ ಎಂದು ಬರೆಯುವಂತೆ ಸೂಚಿಸಲಾಗಿದೆ.

ಆದರೆ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಹೆಣ್ಣು ಮಕ್ಕಳ ಜೀವನ ಸುಧಾರಣೆಗಾಗಿ ಯೋಜನೆ ರೂಪಿಸಿದ್ದಾರೆಯೇ? ನಿಜಕ್ಕೂ 1-18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ 10,000 ರು. ಚೆಕ್‌ ನೀಡುವ ಯೋಜನೆ ಜಾರಿಗೊಳಿಸಿದ್ದಾರೆಯೇ ಎಂದು ಹುಡುಕ ಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.

ವಾಸ್ತವವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 1-18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ 10,000 ರು. ಚೆಕ್‌ ನೀಡುವ ಯಾವುದೇ ಯೋಜನೆಯನ್ನೂ ಜಾರಿ ಮಾಡಿಲ್ಲ. ಎಂದಿನಂತೆ ಇದೊಂದು ವಾಟ್ಸ್‌ಆ್ಯಪ್‌ ಸ್ಕಾ್ಯಮ್‌. ಈ ರೀತಿಯ ನಕಲಿ ವೆಬ್‌ಸೈಟ್‌ಗಳನ್ನು ಪ್ರಾರಂಭಿಸಿ, ಜನರನ್ನು ಲಿಂಕ್‌ ಓಪನ್‌ ಮಾಡುವಂತೆ ಮಾಡಿ ಅಲ್ಲಿರುವ ಜಾಹೀರಾತುಗಳಿಂದ ಹಣ ಪಡೆಯುವ ಮಾರ್ಗವಿದು.

ಅಲ್ಲದೆ ಇಲ್ಲಿ ನೀಡಲಾಗಿರುವ ವೆಬ್‌ಸೈಟ್‌ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಅಲ್ಲ. ಹಾಗೆಯೇ ವೆಬ್‌ಸೈಟ್‌ನಲ್ಲಿನಲ್ಲಿ ಪೋಷಕರ ವಿಳಾಸ, ಹೆಣ್ಣು ಮಗಳ ಹೆಸರು ಮತ್ತು ಯಾವ ರಾಜ್ಯ ಎಂದು ಕೇಳಲಾಗಿದೆಯೇ ಹೊರತು ಸಂಪರ್ಕಕ್ಕೆ ಬೇಕಾದ ಯಾವುದೇ ಮಾಹಿತಿ ಕೇಳಿಲ್ಲ.