ವಾಷಿಂಗ್ಟನ್ :  ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಅತ್ಯುತ್ತಮ ಪ್ರಧಾನಿ, ಭಾರತದ 2 ಸಾವಿರ ರು. ನೋಟು ವಿಶ್ವದ ಅತ್ಯುತ್ತಮ ಕರೆನ್ಸಿ ಎಂಬ ಸುಳ್ಳು ಸಂದೇಶಗಳು ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡಿದ್ದವು. ಸದ್ಯ ಅಂಥದ್ದೇ ಸಂದೇಶವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 

ಅದರಲ್ಲಿ ಭಾರತದ ರಾಷ್ಟ್ರಗೀತೆಗೆ ವಿಶ್ವಸಂಸ್ಥೆಯ ಯುನೆಸ್ಕೊ ಜಗತ್ತಿನ ಉತ್ತಮ ರಾಷ್ಟ್ರಗೀತೆ ಎಂದು ಮಾನ್ಯತೆ ನೀಡಿದೆ ಎಂದು ಹೇಳಲಾಗುತ್ತಿದೆ. ಹೀಗೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಜಾಲತಣಗಳಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ, ‘ಭಾರತೀಯರೆಲ್ಲರಿಗೂ ಸಂತಸದ ವಿಚಾರ. 

ನಮ್ಮ ರಾಷ್ಟ್ರಗೀತೆ ‘ಜನ ಗನ ಮನ’ಕ್ಕೆ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಆರ್ಥಿಕ, ವೈಜ್ಞಾನಿಕ, ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೊ) ಜಗತ್ತಿನ ಅತ್ಯುತ್ತಮ ರಾಷ್ಟ್ರಗೀತೆ ಎಂಬ ಮಾನ್ಯತೆ ನೀಡಿದೆ. ಈ ಸಂದೇಶವನ್ನು ಎಲ್ಲರಿಗೂ ಶೇರ್‌ ಮಾಡಿ’ ಎಂದು ಹೇಳಲಾಗಿದೆ. ಈ ರೀತಿಯ ಸಂದೇಶ ಹಲವು ವರ್ಷಗಳಿಂದಲೂ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಆದರೆ ನಿಜಕ್ಕೂ ಯುನೆಸ್ಕೊ ನಮ್ಮ ಭಾರತದ ರಾಷ್ಟ್ರಗೀತೆಗೆ ವಿಶ್ವದ ಅತ್ಯುತ್ತಮ ರಾಷ್ಟ್ರಗೀತೆ ಎಂದು ಮಾನ್ಯತೆ ನೀಡಿದೆಯೇ ಎಂದು ಹುಡುಕಹೊರಟಾಗ ಇದೊಂದು ಸುಳ್ಳುಸುದ್ದಿ ಎಂಬುದು ದೃಢವಾಗಿದೆ. ಈ ಕುರಿತು ಸ್ವತಃ ಯುನೆಸ್ಕೊ ಸ್ಪಷ್ಟನೆ ನೀಡಿದ್ದು, ಇದೊಂದು ಸಂಪೂರ್ಣ ವದಂತಿ. ಯುನೆಸ್ಕೊ ಈ ರೀತಿಯ ಯಾವುದೇ ಘೋಷಣೆಯನ್ನೂ ಮಾಡಿಲ್ಲ ಎಂದು ಹೇಳಿದೆ. ಹಾಗಾಗಿ ವಿಶ್ವಸಂಸ್ಥೆ ಭಾರತದ ರಾಷ್ಟ್ರಗೀತೆಗೆ ಜಗತ್ತಿನ ಅತ್ಯುತ್ತಮ ರಾಷ್ಟ್ರಗೀತೆ ಎಂಬ ಮಾನ್ಯತೆ ನೀಡಿದೆ ಎಂದು ಹರಿದಾಡುತ್ತಿರುವ ಸಂದೇಶ ಸುಳ್ಳು.