ನವದೆಹ(ಜ.02): ರಕ್ಷಣಾ ಸಚಿವೆಯೊಂದಿಗೆ ಮಹಿಳಾ ಸೇನಾಧಿಕಾರಿಯೊಬ್ಬರು ನಿಂತಿರುವ ಫೋಟೋ ಇದೀಗ ವೈರಲ್‌ ಆಗಿದೆ. ಈ ಫೋಟೋದಲ್ಲಿ ನಿರ್ಮಲಾ ಸೀತಾರಾಮನ್‌ ಜೊತೆಗಿರುವ ಮಹಿಳೆ ನಿರ್ಮಲಾ ಸೀತಾರಾಮನ್‌ ಅವರ ಮಗಳು ಎಂದು ಹೇಳಲಾಗಿದೆ. ‘ಟೀಮ್‌ ಮೋದಿ ಸಪೋರ್ಟರ್‌ ಜಲೂರ್‌’ ಫೇಸ್‌ಬುಕ್‌ ಪೇಜ್‌ ಮೊದಲಿಗೆ ಇದನ್ನು ಪೋಸ್ಟ್‌ ಮಾಡಿದ್ದು, 350 ಬಾರಿ ಶೇರ್‌ ಆಗಿದೆ. ಐ ಸಪೋರ್ಟ್‌ ಆರ್‌ಎಸ್‌ಎಸ್‌ ಫೇಸ್‌ಬುಕ್‌ ಪೇಜ್‌ ಕೂಡಾ ಪೋಸ್ಟ್‌ ಮಾಡಿದ್ದು, ಅದು 70 ಬಾರಿ ಶೇರ್‌ ಆಗಿದೆ. ಟ್ವೀಟರ್‌ನಲ್ಲೂ ಈ ಫೋಟೋ ಓಡಾಡುತ್ತಿದೆ.

ಆದರೆ ನಿಜಕ್ಕೂ ನಿರ್ಮಲಾ ಸೀತಾರಾಮನ್‌ ಮಗಳು ಭಾರತೀಯ ಸೇನೆಯಲ್ಲಿದ್ದಾರೆಯೇ ಎಂದು ಪರಿಶೀಲಿಸಿದಾಗ ಈ ಫೋಟೋದಲ್ಲಿರುವವರು ಸೀತಾರಾಮನ್‌ ಮಗಳಲ್ಲ ಎಂಬುದು ತಿಳಿದುಬಂದಿದೆ.

‘ಬೂಮ್‌’ ಈ ಬಗ್ಗೆ ಭಾರತೀಯ ಸೇನೆ ವಕ್ತಾರ ರೋಹನ್‌ ಆನಂದ್‌ ಬಳಿ ಸ್ಪಷ್ಟನೆ ಪಡೆದಿದ್ದು, ಅವರು ‘ರಕ್ಷಣಾ ಮಂತ್ರಿ ಜೊತೆಗಿರುವ ಆಫೀಸರ್‌ ನಿರ್ಮಲಾ ಮಗಳಲ್ಲ. ಇತ್ತೀಚೆಗೆ ಸೇನೆಗೆ ನೇಮಕವಾದ ಅಧಿಕಾರಿ ಅವರಾಗಿದ್ದು, ರಕ್ಷಣಾ ಮಂತ್ರಿಯನ್ನು ಭೇಟಿಯಾದಾಗ ತೆಗೆದ ಫೋಟೋ ಇದು’ ಎಂದಿದ್ದಾರೆ. ಜೊತೆಗೆ ನಿರ್ಮಲಾ ಸೀತಾರಾಮನ್‌ ಅವರ ಕುಟುಂಬದ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕಿದಾಗ ಅವರ ಮಗಳ ಹೆಸರು ಪರಕಾಲಾ ವಾಙ್ಮಯಿ ಎಂದು ಗೊತ್ತಾಗಿದೆ.

ಹಾಗಿದ್ದರೆ ಈ ಫೋಟೋದಲ್ಲಿರುವವರು ಯಾರು ಎಂದು ಹುಡುಕಿದಾಗ ಈಕೆ ಮಂಗಳೂರು ಮೂಲದ ನಿಖಿತಾ ವೀರಯ್ಯ ಎಂಬ ಯುವತಿಯಾಗಿದ್ದು, ಎರಡು ವರ್ಷದ ಹಿಂದೆ ಸೇನಾಪಡೆಗೆ ಸೇರಿದ್ದಾರೆಂದು ತಿಳಿದುಬಂದಿದೆ. ಫೇಸ್‌ಬುಕ್‌ನಲ್ಲಿ ಸ್ವತಃ ನಿಖಿತಾ ವೀರಯ್ಯ ಈ ಫೋಟೋ ಶೇರ್‌ ಮಾಡಿದ್ದು, ಅವರನ್ನು ಪ್ರಶ್ನಿಸಿದಾಗ ನಿರ್ಮಲಾ ಅವರ ಜೊತೆಗೆ ನಿಂತಿರುವುದು ನಾನೇ ಎಂದಿದ್ದಾರೆ.