ಆಂಗ್ಲೋ- ಇಂಡಿಯನ್‌ ನಾಮನಿರ್ದೇಶಿತ ಸ್ಥಾನವನ್ನು ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದು, ಮೈತ್ರಿ ಪಕ್ಷದ ಒಮ್ಮತ ಆಂಗ್ಲೋ-ಇಂಡಿಯನ್‌ ಅಭ್ಯರ್ಥಿಯಾಗಿ ವಿನಿಶಾ ನಿರೋ ಅವರು ಎರಡನೇ ಬಾರಿ ವಿಧಾನಸಭೆಗೆ ಪ್ರವೇಶಿಸುವುದು ಖಚಿತವಾದಂತಾಗಿದೆ. 

ಬೆಂಗಳೂರು :  ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಖಾಲಿ ಇರುವ ಆಂಗ್ಲೋ- ಇಂಡಿಯನ್‌ ನಾಮನಿರ್ದೇಶಿತ ಸ್ಥಾನವನ್ನು ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದು, ಮೈತ್ರಿ ಪಕ್ಷದ ಒಮ್ಮತ ಆಂಗ್ಲೋ-ಇಂಡಿಯನ್‌ ಅಭ್ಯರ್ಥಿಯಾಗಿ ವಿನಿಶಾ ನಿರೋ ಅವರು ಎರಡನೇ ಬಾರಿ ವಿಧಾನಸಭೆಗೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ವಿನಿಶಾ ನಿರೋ ಅವರ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆಂಗ್ಲೋ-ಇಂಡಿಯನ್‌ ಕೋಟಾದಡಿ ವಿಧಾನಸಭಾ ಸದಸ್ಯರನ್ನಾಗಿ ನಾಮಕರಣ ಮಾಡುವ ಪ್ರಸ್ತಾವವನ್ನು ರಾಜ್ಯಪಾಲರಿಗೆ ಶೀಘ್ರದಲ್ಲಿಯೇ ಕಳುಹಿಸಿಕೊಡಲಿದ್ದಾರೆ. ಯಾವುದೇ ಆಕ್ಷೇಪಣೆಗಳು ಬರುವ ಸಾಧ್ಯತೆ ತೀರಾ ಕಡಿಮೆ ಇರುವ ಹಿನ್ನೆಲೆಯಲ್ಲಿ ವಿನಿಶಾ ನಿರೋ ಅವರೇ ಎರಡನೇ ಬಾರಿಗೆ ವಿಧಾನಸಭೆಯ ಸದಸ್ಯರಾಗಿ ಆಂಗ್ಲೋ-ಇಂಡಿಯನ್‌ ಕೋಟಾದಡಿ ನಾಮನಿರ್ದೇಶನರಾಗುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ತಿಳಿದು ಬಂದಿದೆ.

ವಿನಿಶಾ ಅವರು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲೂ ಆಂಗ್ಲೋ ಇಂಡಿಯನ್‌ ನಾಮನಿರ್ದೇಶಿತ ಸದಸ್ಯರಾಗಿದ್ದರು. ಈ ಬಾರಿ ವಿನಿಶಾ ನಿರೋ ಮತ್ತು ಐವಾನ್‌ ನಿಗ್ಲಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಜೆಡಿಎಸ್‌ನಲ್ಲಿ ಯಾರೂ ಆಕಾಂಕ್ಷಿಗಳು ಇಲ್ಲ. ಇದು ಕಾಂಗ್ರೆಸ್‌ಗೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಯಾವುದೇ ಅಡೆ-ತಡೆ ಇಲ್ಲದಂತಾಯಿತು. ಆದರೆ, ಐವಾನ್‌ ನಿಗ್ಲಿ ಸಹ ನಾಮನಿರ್ದೇಶನಕ್ಕೆ ಅರ್ಜಿ ಸಲ್ಲಿಸಿದ್ದರು. ಅವರನ್ನು ಮನವೊಲಿಸಿ ಹಿಂದೆ ಸರಿಯುವಂತೆ ಮಾಡುವಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಯಶಸ್ವಿಯಾಗಿದೆ.

ಐವಾನ್‌ ನಿಗ್ಲಿ ಅವರು ಹಿಂದೆ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಆಂಗ್ಲೋ-ಇಂಡಿಯನ್‌ ಕೋಟಾದಡಿ ನಾಮ ನಿರ್ದೇಶಿತರಾಗಿದ್ದರು. ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರು ವಿನಿಶಾ ನಿರೋ ಪರ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದ್ದು, ಅವರು ಆಂಗ್ಲೋ-ಇಂಡಿಯನ್‌ ಕೋಟಾದಡಿ ಶಾಸಕಿಯಾಗುವುದು ಬಹುತೇಕ ಖಚಿತ ಎಂದು ಸಮ್ಮಿಶ್ರ ಸರ್ಕಾರದ ಮೂಲಗಳು ತಿಳಿಸಿವೆ.

ಸಂಹಿತೆ ಅಡ್ಡಿ?:

ಈ ನಡುವೆ, ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಕಾರಣ ವಿನಿಶಾ ನಿರೋ ಅವರನ್ನು ನಾಮ ನಿರ್ದೇಶನಕ್ಕೆ ನೀತಿ ಸಂಹಿತೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದನ್ನು ಮನಗಂಡ ರಾಜ್ಯ ಸಮ್ಮಿಶ್ರ ಸರ್ಕಾರವು ಚುನಾವಣಾ ಆಯೋಗಕ್ಕೂ ಪತ್ರ ಬರೆದಿದೆ. ವಿನಿಶಾ ನಿರೋ ಅವರನ್ನು ನಾಮನಿರ್ದೇಶನ ಮಾಡುವ ಸರ್ಕಾರದ ಪ್ರಕ್ರಿಯೆಗೆ ಸಾಮಾನ್ಯವಾಗಿ ಚುನಾವಣಾ ನೀತಿ ಸಂಹಿತೆ ಯಾವುದೇ ಅಡ್ಡಿಯಾಗುವುದಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಆಯೋಗದಿಂದ ಅನುಮತಿ ಕೋರಲಾಗಿದೆ. ಆಯೋಗವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅಲ್ಲಿಂದಲೂ ಹಸಿರು ನಿಶಾನೆ ಸಿಗುವ ಸಾಧ್ಯತೆ ಎಂಬ ವಿಶ್ವಾಸವನ್ನು ರಾಜ್ಯ ಸರ್ಕಾರ ಹೊಂದಿದೆ.

ಅನುದಾನ ಬಳಕೆಯಲ್ಲಿ ಹಿಂದೆ?:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವಧಿಯಲ್ಲಿ ಶಾಸಕಿಯಾಗಿದ್ದ ವಿನಿಶಾ ನಿರೋ ವಿರುದ್ಧ ಅನುದಾನವನ್ನು ತಮ್ಮ ಸಮುದಾಯದ ಅಭಿವೃದ್ಧಿಗೆ ಸರಿಯಾಗಿ ಬಳಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಯಾವುದೇ ಕ್ಷೇತ್ರದಿಂದ ಆಯ್ಕೆಯಾಗದಿದ್ದರೆ ಆಂಗ್ಲೋ-ಇಂಡಿಯನ್‌ ನಾಮನಿರ್ದೇಶಿತರಿಗೆ ಶಾಸಕರಿಗೆ ಲಭ್ಯವಾಗುವ ಕ್ಷೇತ್ರದ ಅನುದಾನ ಲಭ್ಯವಾಗುತ್ತದೆ. ವಾರ್ಷಿಕ ಮೂರು ಕೋಟಿ ರು. ಸರ್ಕಾರ ನೀಡಿದರೂ ಸಮುದಾಯದ ಅಭಿವೃದ್ಧಿಗೆ ಬಳಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿತ್ತು.

ವರದಿ : ಪ್ರಭುಸ್ವಾಮಿ ನಟೇಕರ್‌