ದಾವಣಗೆರೆ (ಸೆ.16): ದಲಿತ ಮಹಿಳೆಯೋರ್ವಳು ಅಂಗನವಾಡಿ ಕಾರ್ಯಕರ್ತೆಯಾಗಿದ್ದಕ್ಕೆ ಗ್ರಾಮಸ್ಥರು ಕಳೆದ ಎರಡು ತಿಂಗಳಿನಿಂದ ಅಂಗನವಾಡಿ ಕಚೇರಿಗೆ ಬೀಗ ಜಡಿದಿರುವ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಎಳೆಹೊಳೆ ಅಂಗನವಾಡಿ ಕೇಂದ್ರಕ್ಕೆ ಕಳೆದ ಎರಡು ತಿಂಗಳಿಂದ ಬೀಗ ಬಿದ್ದಿದೆ.ಅಲ್ಲಿನ ಗ್ರಾಮಸ್ಥರು ಆಯ್ಕೆಯಾದ ಅಂಗನವಾಡಿ ಶಿಕ್ಷಕಿ ನೇತ್ರಾವತಿಗೆ ಅವಕಾಶವನ್ನು ನೀಡುತ್ತಿಲ್ಲ.

ಹೊಳೆಸಿರಿಗೆರೆಯಲ್ಲಿ ಅಂಗನವಾಡಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನೇತ್ರಾವತಿ ಖಾಲಿಯಾದ ಎಳೆಹೊಳೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಗೆ ಒಟ್ಟು 16 ಅರ್ಜಿಗಳು ಬಂದಿದ್ದು ಎಲ್ಲಾ ದೃಷ್ಟಿಯಲ್ಲಿ ಅರ್ಹತೆ ಹೊಂದಿದ್ದ ಸಿ ನೇತ್ರಾವತಿಯನ್ನು ಆಯ್ಕೆಮಾಡಲಾಗಿತ್ತು. ಆದರೆ ಅಲ್ಲಿನ ಗ್ರಾಮಸ್ಥರು ಮಾತ್ರ ಈ ಮಹಿಳೆಗೆ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡಲು ಅವಕಾಶ ಕೊಡುತ್ತಿಲ್ಲ.