Asianet Suvarna News Asianet Suvarna News

ಛತ್ತೀಸ್‌ಗಢದಲ್ಲಿದೆ ರಫೇಲ್‌ ಹೆಸರಿನ ಹಳ್ಳಿ!: ವಿವಾದದಿಂದಾಗಿ ಗ್ರಾಮಸ್ಥರಿಗೆ ಅಪಹಾಸ್ಯ!

ಛತ್ತೀಸ್‌ಗಢದಲ್ಲಿ ಇದೆ ರಫೇಲ್‌ ಹೆಸರಿನ ಹಳ್ಳಿ!| ಯುದ್ಧವಿಮಾನ ವಿವಾದದಿಂದಾಗಿ ಅಪಹಾಸ್ಯ| ಊರ ಹೆಸರು ಬದಲಿಸುವಂತೆ ಜನರ ಮೊರೆ

Village In Chhattisgarh Is Facing Problems Due To Rafale
Author
Bangalore, First Published Apr 16, 2019, 9:06 AM IST

ರಾಯ್‌ಪುರ[ಏ.16]: ರಫೇಲ್‌ ಹೆಸರು ಕೇಳಿದರೆ ಕೇಂದ್ರದಲ್ಲಿ ಅಧಿಕಾರಾರೂಢ ಎನ್‌ಡಿಎ ಸರ್ಕಾರ ಮಾತ್ರ ಬೆಚ್ಚಿಬೀಳುತ್ತೆ ಎಂದೆಣಿಸಬೇಡಿ. ಇತ್ತೀಚಿನ ದಿನಗಳಲ್ಲಿ ಈ ಹೆಸರು ಕೇಳಿದರೆ ಛತ್ತೀಸ್‌ಗಢದ ಪುಟ್ಟಗ್ರಾಮವೊಂದರ ಜನರೂ ಬೆಚ್ಚಿಬೀಳುವಂತಾಗಿದೆ. ಕಾರಣ, ಈ ಗ್ರಾಮದ ಹೆಸರು ಕೂಡಾ ‘ರಫೇಲ್‌’!

ಹೌದು. ಛತ್ತೀಸ್‌ಗಢದ ಮಹಾಸಮುಂದ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪುಟ್ಟಹಳ್ಳಿಯೊಂದರ ಹೆಸರು ರಫೇಲ್‌. ಗ್ರಾಮಕ್ಕೆ ಯಾರು ಈ ಹೆಸರು ಇಟ್ಟರು ಎಂಬುದು ಈ ಗ್ರಾಮದ 200 ಕುಟುಂಬಗಳ ಪೈಕಿ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಹೆಸರಿನ ಬಗ್ಗೆ ಯಾರೂ ಇದುವರೆಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಲೇ ಯಾವಾಗ, ಕಾಂಗ್ರೆಸ್‌ ನಾಯಕರು ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆಸಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಶುರು ಮಾಡಿದರೋ, ಆಗಿನಿಂದ ರಫೇಲ್‌ ಗ್ರಾಮಸ್ಥರಿಗೂ ಸಂಕಷ್ಟಎದುರಾಗಿದೆ.

ಕಾರಣ, ಅಕ್ಕಪಕ್ಕದ ಗ್ರಾಮದ ಜನರು, ರಫೇಲ್‌ ಹೆಸರು ಮುಂದಿಟ್ಟುಕೊಂಡೇ ಜನರನ್ನು ಅಣಕವಾಡಲು ಶುರು ಮಾಡಿದ್ದಾರಂತೆ. ಅದರಲ್ಲೂ ತಾವು ಅಧಿಕಾರಕ್ಕೆ ಬಂದರೆ ರಫೇಲ್‌ ವಿರುದ್ಧ ತನಿಖೆ ನಡೆಸುವ ಕಾಂಗ್ರೆಸ್‌ ಭರವಸೆಯನ್ನೇ ಮುಂದಿಟ್ಟುಕೊಂಡು ‘ನೋಡಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನೀವೆಲ್ಲಾ ಜೈಲು ಸೇರಬೇಕಾಗುತ್ತದೆ’ ಎಂದೆಲ್ಲಾ ಗ್ರಾಮಸ್ಥರನ್ನು ಹಾಸ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.

ಚುನಾವಣೆ ಎದುರಾಗಿರುವುದರಿಂದ ರಫೇಲ್‌ ಖರೀದಿ ಹಗರಣ ಭಾರೀ ಚರ್ಚೆಯಾಗುತ್ತಿದೆ. ಇತರ ಗ್ರಾಮದ ಜನರು ನಮ್ಮನ್ನು ಗೇಲಿ ಮಾಡುತ್ತಿದ್ದಾರೆ. ಗ್ರಾಮದ ಹೆಸರನ್ನು ಬದಲಾಯಿಸುವಂತೆ ನಾವು ಮುಖ್ಯಮಂತ್ರಿಗಳ ಕಚೇರಿಗೆ ತೆರಳಿದ್ದೆವು. ಆದರೆ, ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ರಫೇಲ್‌ ವಿವಾದದಿಂದಾಗಿ ಗ್ರಾಮದ ಘನತೆ ಹಾಳಾಗುತ್ತಿದೆ. ಆದರೆ, ಯಾರೂ ಈ ಬಗ್ಗೆ ಗಮನ ನೀಡುತ್ತಿಲ್ಲ. ಗ್ರಾಮಕ್ಕೆ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ರಾಜಕಾರಣಿಗಳು ಕಲ್ಪಿಸಿಲ್ಲ ಎಂದು ಗ್ರಾಮದ ಹಿರಿಯ ನಾಗರಿಕ ಧರಂ ಸಿಂಗ್‌ ಎನ್ನುವವರು ನೋವು ತೋಡಿಕೊಂಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28

Follow Us:
Download App:
  • android
  • ios