ಸಿರವಾರ :  ಅಕ್ರಮ ಮರಳುಗಾರಿಕೆ ಪರಿಶೀಲನೆ ವೇಳೆ ಮರಳು ತುಂಬಿದ್ದ ಲಾರಿ ಹರಿದು ಗ್ರಾಮ ಲೆಕ್ಕಿಗನೊಬ್ಬ ಮೃತಪಟ್ಟಘಟನೆ ಶನಿವಾರ ಸಂಜೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಬುದ್ದಿನ್ನಿಯಲ್ಲಿ ನಡೆದಿದೆ. ಮರಳು ಸಾಗಣೆ ಪರವಾನಗಿ ಕೇಳಿದಾಗ ಕುಡಿದ ಮತ್ತಿನಲ್ಲಿದ್ದ ಚಾಲಕ ಲಾರಿ ಸಮೇತ ಪರಾರಿಯಾಗಲು ಯತ್ನಿಸಿದಾಗ ಗ್ರಾಮ ಲೆಕ್ಕಿಗನ ಮೇಲೆ ಲಾರಿ ಹರಿದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಸಾಹೇಬ್‌ ಪಟೇಲ್‌(45) ಮೃತ ಗ್ರಾಮ ಲೆಕ್ಕಾಧಿಕಾರಿ. ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧಿಸಿ ಗ್ರಾಮಸ್ಥರಿಂದ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿರವಾರ ಕಂದಾಯ ನಿರೀಕ್ಷಕರ ಆದೇಶದಂತೆ ಖಚಿತ ಮಾಹಿತಿ ಮೇರೆಗೆ ತಪಾಸಣೆಗೆ ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ.

ಆಗಿದ್ದೇನು?: ಬೆಳೆ ಸಮೀಕ್ಷೆಗೆಂದು ಸಾಹೇಬ್‌ ಪಟೇಲ್‌ ಅವರು ಬುದ್ದಿನ್ನಿ ಗ್ರಾಮಕ್ಕೆ ಹೋಗಿದ್ದಾರೆ. ಅಲ್ಲಿ ಒಂದಷ್ಟುಹೊಲಗಳಿಗೆ ಹೋಗಿ ಪರಿಶೀಲನೆ ನಡೆಸಿ ರಸ್ತೆ ಬದಿಯ ಟೀ ಅಂಗಡಿಯೊಂದರಲ್ಲಿ ಕುಳಿತಿದ್ದಾಗ ಅದೇ ದಾರಿಯಲ್ಲಿ ಮರಳು ಲಾರಿಯೊಂದು ಸಾಗುತ್ತಿತ್ತು. ತಕ್ಷಣ ಲಾರಿಯನ್ನು ತಡೆದ ಗ್ರಾಮ ಲೆಕ್ಕಾಧಿಕಾರಿ ಪರವಾನಗಿ ತೋರಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆಗ ಚಾಲಕ ಏಕಾಏಕಿ ಲಾರಿಯನ್ನು ಮುಂದಕ್ಕೆ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಾಹೇಬ್‌ ಪಟೇಲ್‌ ಅವರ ಮೇಲೆಯೇ ಲಾರಿ ಹರಿದು ಅವರ ಕಾಲು ಮುರಿದಿದೆ. ತಕ್ಷಣ ಸಾಹೇಬ್‌ ಪಟೇಲ್‌ ಅವರನ್ನು ರಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಘಟನೆ ನಡೆದ ತಕ್ಷಣ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ವೇಳೆ ಲಾರಿ ಚಾಲಕ ಪಾನಮತ್ತನಾಗಿದ್ದ ಎಂದು ಕೆಲ ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿ ಶರತ್‌ ಬಿ, ಎಸ್ಪಿ ಡಿ.ಕಿಶೋರ್‌ ಬಾಬು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಘಟನೆಗೆ ಸಂಬಂಧಿಸಿ ನಾವು ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಈಗಲೇ ಇದು ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ ಎಂದು ಹೇಳಲಾಗದು. ಒಂದು ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರೆ ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದೇವೆ.

- ಶರತ್‌ ಬಿ. ರಾಯಚೂರು ಜಿಲ್ಲಾಧಿಕಾರಿ