ಬೆಂಗಳೂರು: ಚಿತ್ರ ನಟ ದುನಿಯಾ ವಿಜಯ್‌ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಹೊಸದಾಗಿ ಸೇರಿಸಲಾಗಿರುವ ಸಾಕ್ಷ್ಯ ನಾಶ, ಮನೆಯ ಅತಿಕ್ರಮ ಪ್ರವೇಶ ಮತ್ತು ದರೋಡೆ ಆರೋಪಗಳಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ವಿಜಯ್‌ ಮೊದಲನೆ ಪತ್ನಿ ನಾಗರತ್ನ ನಗರದ ಸೆಷನ್ಸ್‌ ಕೋರ್ಟ್‌ ಮೊರೆ ಹೋಗಿದ್ದಾರೆ. 

ನಾಗರತ್ನ ಅವರ ಅರ್ಜಿ ಬುಧವಾರ 60ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಮುಂದೆ ವಿಚಾರಣೆಗೆ ಬಂದಿತ್ತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿದ ನ್ಯಾಯಾಲಯ, ವಿಚಾರಣೆಯನ್ನು ನ.5ಕ್ಕೆ ಮುಂದೂಡಿತು.

ಇದೇ ವೇಳೆ ನಾಗರತ್ನ ಅವರ ನಿರೀಕ್ಷಣಾ ಜಾಮೀನು ಅರ್ಜಿ ಸಂಬಂಧ ತಮ್ಮ ವಾದ ಮಂಡಿಸಲು ಅವಕಾಶÜ ಕಲ್ಪಿಸಬೇಕು ಎಂದು ಕೋರಿ ಕೀರ್ತಿಗೌಡ ಪರ ವಕೀಲರು ಸಹ ಮಧ್ಯಂತರ ಅರ್ಜಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕೀರ್ತಿ ಗೌಡ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಈಗಾಗಲೇ ನಾಗರತ್ನ ಅವರು ಅಧೀನ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. 

ಆದರೆ, ಇತ್ತೀಚೆಗೆ ಕೀರ್ತಿ ಗೌಡ ಮೇಲಿನ ಹಲ್ಲೆಯ ದೃಶ್ಯಗಳನ್ನು ಬಿಡುಗಡೆಯಾದ ಹಿನ್ನೆಲೆಯಲ್ಲಿ ಗಿರಿನಗರ ಠಾಣಾ ಪೊಲೀಸರು, ನಾಗರತ್ನ ಅವರ ವಿರುದ್ಧ ಹೆಚ್ಚುವರಿಯಾಗಿ ದರೋಡೆ, ಸಾಕ್ಷ್ಯ ನಾಶ ಯತ್ನ ಮತ್ತು ಮನೆಯ ಅತಿಕ್ರಮ ಪ್ರವೇಶ ಪ್ರಕರಣಗಳನ್ನು ಸೇರಿಸಿದ್ದಾರೆ. ಈ ಪ್ರಕರಣಗಳ ಸಂಬಂಧ ನಾಗರತ್ನ ಅವರು ಮತ್ತೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.