ಲಂಡನ್‌[ಡಿ.19]: ಮದ್ಯದ ದೊರೆ ವಿಜಯ ಮಲ್ಯ ಅವರಿಂದ ವಸೂಲಾಗದ ಸುಮಾರು 9 ಸಾವಿರ ಕೋಟಿ ರುಪಾಯಿ ಸಾಲವನ್ನು ಹೇಗಾದರೂ ಮಾಡಿ ವಸೂಲು ಮಾಡಲು ಯತ್ನ ನಡೆಸಿರುವ ಭಾರತದ 13 ಬ್ಯಾಂಕ್‌ಗಳ ಒಕ್ಕೂಟ, ಈಗ ಬ್ರಿಟನ್‌ ಉಚ್ಚ ನ್ಯಾಯಾಲಯದಲ್ಲಿ ಮಲ್ಯ ಅವರ ವಿರುದ್ಧ ದಿವಾಳಿ ಅರ್ಜಿಯನ್ನು ಸಲ್ಲಿಸಿವೆ. ಹೀಗಾಗಿ ಈಗಾಗಲೇ ಗಡೀಪಾರು ಆದೇಶಕ್ಕೆ ಗುರಿಯಾಗಿರುವ ಮಲ್ಯಗೆ ಇನ್ನೊಂದು ಸಂಕಟ ಆರಂಭವಾಗಿದೆ.

ಬ್ರಿಟನ್‌ ಮೂಲದ ಟಿಎಲ್‌ಟಿ ಎಲ್‌ಎಲ್‌ಪಿ ಎಂಬ ಕಾನೂನು ಸಂಸ್ಥೆಯು ಈ ಬ್ಯಾಂಕ್‌ಗಳ ಪರ ಅರ್ಜಿ ಸಲ್ಲಿಸಿದೆ. ಅರ್ಜಿಯನ್ನು ಬ್ರಿಟನ್‌ ಹೈಕೋರ್ಟ್‌ ವಿಚಾರಣೆಗೆ ಅಂಗೀಕರಿಸಿದ್ದು, ತನ್ನ ದಿವಾಳಿ ಅರ್ಜಿ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ವಿಚಾರಣೆಯನ್ನು 2019ರ ಆದಿ ಭಾಗದಲ್ಲಿ ನಿಗದಿಪಡಿಸಿದೆ. ಒಂದೊಮ್ಮೆ ಬ್ಯಾಂಕ್‌ಗಳ ಅರ್ಜಿಗೆ ಮನ್ನಣೆ ಸಿಕ್ಕರೆ ಮಲ್ಯ ಅವರ ಬ್ರಿಟನ್‌ನಲ್ಲಿರುವ ಆಸ್ತಿಗಳ ಜಪ್ತಿಗೆ ಬ್ಯಾಂಕ್‌ಗಳಿಗೆ ಹಸಿರು ನಿಶಾನೆ ಸಿಕ್ಕಂತಾಗುತ್ತದೆ.

ಮಲ್ಯ ಅವರಿಗೆ ಎಸ್‌ಬಿಐ ಸೇರಿದಂತೆ 13 ಬ್ಯಾಂಕ್‌ಗಳು ಸುಮಾರು 6 ಸಾವಿರ ಕೋಟಿ ರು. ಸಾಲ ನೀಡಿದ್ದವು. ಇದು ಈಗ ಬಡ್ಡಿ ಸೇರಿಸಿ 9 ಸಾವಿರ ಕೋಟಿ ರು. ಆಗಿದೆ. ಇದನ್ನು ಕಟ್ಟದೇ ಮಲ್ಯಲಂಡನ್‌ಗೆ ಪರಾರಿಯಾಗಿದ್ದಾರೆ.