ವಿಜಯ್ ಮಲ್ಯ ಅವರು ವಿವಿಧ ಬ್ಯಾಂಕ್'ಗಳಲ್ಲಿ 9 ಸಾವಿರ ಕೋಟಿ ರೂ ಮೊತ್ತದ ಸಾಲ ಮಾಡಿ ಮರುಪಾವತಿ ಮಾಡದೇ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

ಲಂಡನ್(ಏ. 18): ದೇಶದ ವಿವಿಧ ಬ್ಯಾಂಕ್'ಗಳಿಗೆ ಕೈಕೊಟ್ಟು ವಿದೇಶಕ್ಕೆ ಹಾರಿಹೋಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಕೊನೆಗೂ ಅರೆಸ್ಟ್ ಆಗಿದ್ದಾರೆ. ಸ್ಕಾಟ್'ಲ್ಯಾಂಡ್ ಯಾರ್ಡ್ ಪೊಲೀಸರು ಇಂದು ಲಂಡನ್'ನಲ್ಲಿ ಮಲ್ಯರನ್ನು ಬಂಧಿಸಿದ್ದಾರೆ. ಇಂದೇ ವೆಸ್ಟ್'ಮಿನ್ಸ್'ಟರ್ ಕೋರ್ಟ್'ಗೆ ಮಲ್ಯರನ್ನು ಹಾಜರುಪಡಿಸಿ ವಿಚಾರಣೆ ನಡೆಸುವ ನಿರೀಕ್ಷೆ ಇದೆ.

ವಿಜಯ್ ಮಲ್ಯ ಅವರು ವಿವಿಧ ಬ್ಯಾಂಕ್'ಗಳಲ್ಲಿ 9 ಸಾವಿರ ಕೋಟಿ ರೂ ಮೊತ್ತದ ಸಾಲ ಮಾಡಿ ಮರುಪಾವತಿ ಮಾಡದೇ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ವಿಜಯ್ ಮಲ್ಯರನ್ನು ಗಡೀಪಾರು ಮಾಡಬೇಕೆಂದು ಭಾರತ ಸರಕಾರವು ಬ್ರಿಟನ್ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಲ್ಯರನ್ನು ಬಂಧಿಸಲಾಗಿದೆ. ಕೋರ್ಟ್ ವಿಚಾರಣೆ ಬಳಿಕ ಮಲ್ಯರನ್ನು ಬ್ರಿಟನ್'ನಿಂದ ಗಡೀಪಾರು ಮಾಡಿ ಭಾರತಕ್ಕೆ ಒಪ್ಪಿಸುವ ಸಾಧ್ಯತೆ ಇದೆ.

ಕಳೆದ ವರ್ಷದಂದು 9 ಸಾವಿರ ಕೋಟಿ ರೂ ವಂಚನೆಯ ಪ್ರಕರಣವನ್ನು ಕೋರ್ಟ್ ಕೈಗೆತ್ತಿಕೊಳ್ಳುವ ಕೆಲ ದಿನಗಳ ಮುನ್ನವೇ ವಿಜಯ್ ಮಲ್ಯ ದೇಶಬಿಟ್ಟು ಹೋಗಿದ್ದರು. ಕೋರ್ಟ್ ವಿಚಾರಣೆಗೆ ಅವರು ಹಾಜರಾಗಲೇ ಇಲ್ಲ. ಕೋರ್ಟ್ ಸೂಚನೆಯನ್ನೂ ಧಿಕ್ಕರಿಸಿ ಅವರು ವಿದೇಶದ ಬ್ಯಾಂಕ್'ಗಳಲ್ಲಿರುವ ತಮ್ಮ ಮಕ್ಕಳ ಖಾತೆಗಳಿಗೆ 40 ಮಿಲಿಯನ್ ಡಾಲರ್ ಹಣವನ್ನು ವರ್ಗಾಯಿಸಿದ್ದರು. ಈ ಸಂಬಂಧ ಮಲ್ಯ ವಿರುದ್ಧ ದೂರು ದಾಖಲಾಗಿದ್ದು, ಕೋರ್ಟ್'ನಲ್ಲಿ ವಿಚಾರಣೆಯೂ ಮುಕ್ತಾಯಗೊಂಡಿದೆ. ಸುಪ್ರೀಮ್ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.