ಗಂಭೀರ ಸ್ಥಿತಿಯಲ್ಲಿರುವ ವಿದ್ವತ್’ರನ್ನು ಐಸಿಯುನಿಂದ ವಾರ್ಡ್’ಗೆ ಶಿಫ್ಟ್ ಮಾಡುವ ಹಿಂದೆ ಒತ್ತಡ..?

First Published 27, Feb 2018, 9:40 AM IST
Vidwath Siht Genearl Ward In
Highlights

ಮಹಮದ್ ನಲಪಾಡ್‌ಗೆ ಜಾಮೀನು ಸಿಗಲಿ ಎಂಬ ಉದ್ದೇಶದಿಂದ ವೈದ್ಯರ ಮೇಲೆ ರಾಜಕೀಯ ಒತ್ತಡ ಹೇರಿ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಉದ್ಯಮಿ ಪುತ್ರ ವಿದ್ವತ್‌ನನ್ನು ಆಸ್ಪತ್ರೆಯ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಿಸಿದ್ದಾರೆಯೇ? ಹೀಗೊಂದು ಆರೋಪ ಕೇಳಿಬಂದಿದೆ. ಮಲ್ಯ ಆಸ್ಪತ್ರೆಯ ಐಸಿಯುನಲ್ಲಿದ್ದ ವಿದ್ವತ್‌ನನ್ನು ಭಾನುವಾರ ಮಧ್ಯಾಹ್ನ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ.

ಬೆಂಗಳೂರು : ಮಹಮದ್ ನಲಪಾಡ್‌ಗೆ ಜಾಮೀನು ಸಿಗಲಿ ಎಂಬ ಉದ್ದೇಶದಿಂದ ವೈದ್ಯರ ಮೇಲೆ ರಾಜಕೀಯ ಒತ್ತಡ ಹೇರಿ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಉದ್ಯಮಿ ಪುತ್ರ ವಿದ್ವತ್‌ನನ್ನು ಆಸ್ಪತ್ರೆಯ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಿಸಿದ್ದಾರೆಯೇ? ಹೀಗೊಂದು ಆರೋಪ ಕೇಳಿಬಂದಿದೆ. ಮಲ್ಯ ಆಸ್ಪತ್ರೆಯ ಐಸಿಯುನಲ್ಲಿದ್ದ ವಿದ್ವತ್‌ನನ್ನು ಭಾನುವಾರ ಮಧ್ಯಾಹ್ನ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ.

ಆದರೆ, ಆತನ ದೇಹದ ಸ್ಥಿತಿಯಲ್ಲಿ ಸುಧಾರಣೆಯೇನೂ ಆಗಿಲ್ಲ. ಮಾತು ಆಡುವುದಕ್ಕೂ ಕಷ್ಟಪಡುತ್ತಿದ್ದಾರೆ. ಹೀಗಿದ್ದರೂ ಸಾಮಾನ್ಯ ವಾರ್ಡ್‌ಗೆ ತರಲಾಗಿದೆ. ಸೋಮವಾರ ಮೊಹಮ್ಮದ್ ನಲಪಾಡ್‌ನ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದ ಹಿನ್ನೆಲೆಯಲ್ಲಿ ರಾಜಕೀಯ ಒತ್ತಡಪೂರ್ವಕವಾಗಿ ಹೀಗೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿದ್ವತ್ ಐಸಿಯುದಲ್ಲೇ ಇದ್ದರೆ ನಲಪಾಡ್‌ಗೆ ಜಾಮೀನು ಸಿಗುವುದು ಕಷ್ಟವಾಗುತ್ತದೆ. ಏಕೆಂದರೆ, ಇಂತಹ ಪ್ರಕರಣಗಳಲ್ಲಿ ಸಂತ್ರಸ್ತನ ಆರೋಗ್ಯದ ಸ್ಥಿತಿಯನ್ನು ಕೋರ್ಟ್ ಪರಿಗಣಿಸುತ್ತದೆ. ಹಾಗಾಗಿ, ವಿದ್ವತ್‌ನನ್ನು ಐಸಿಯುದಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಿದರೆ ಆತನ ಆರೋಗ್ಯ ಸ್ಥಿತಿ ಸುಧಾರಿಸಿದೆ, ಆತಂಕವೇನೂ ಇಲ್ಲ ಎಂದು ಕೋರ್ಟ್‌ನಲ್ಲಿ ವಾದಿಸಬಹುದು. ತನ್ಮೂಲಕ ಜಾಮೀನು ಪಡೆಯಬಹುದು ಎಂದು ನಲಪಾಡ್ ಬೆಂಬಲಿಗರು ಯೋಚಿಸಿದ್ದರು ಎನ್ನಲಾಗಿದೆ.

ಹೇಳಿಕೆ ಸಿಗದೆ ವಾಪಸಾದ ಸಿಸಿಬಿ: ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್‌ನಿಂದ ಹೇಳಿಕೆ ಪಡೆಯಲು ಸಿಸಿಬಿ ತನಿಖಾ ತಂಡಕ್ಕೆ ಇನ್ನೂ ಸಾಧ್ಯವಾಗುತ್ತಿಲ್ಲ. ವಿದ್ವತ್ ನನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಆತನ ಆರೋಗ್ಯ ಚೇತರಿಕೆಯಾಗಿರಬಹುದು ಎಂಬ ಭಾವನೆಯಿಂದ ಸಿಸಿಬಿ ತನಿಖಾ ತಂಡದ ಅಶ್ವತ್ಥಗೌಡ ಮತ್ತು ಇತರರು ಹಲ್ಲೆ ಘಟನೆಯ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲು ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಮಲ್ಯ ಆಸ್ಪತ್ರೆಗೆ ತೆರಳಿದ್ದರು. ಆದರೆ, ತುಟಿಗೆ ಬಲವಾದ ಪೆಟ್ಟು ಬಿದ್ದಿರುವುದು ಮತ್ತು ಹಲ್ಲು ಮುರಿದಿರುವ ಕಾರಣ ಆತನಿಗೆ ಮಾತನಾಡಲು ಸಾಧ್ಯವಾಗಿಲ್ಲ. ‘ನನ್ನಿಂದ ಮಾತನಾಡಲು ಆಗುತ್ತಿಲ್ಲ, ಕಷ್ಟವಾಗುತ್ತಿದೆ’ ಎಂದಷ್ಟೇ ವಿದ್ವತ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ಕೂಡಲೇ ಮಧ್ಯಪ್ರವೇಶಿಸಿದ ಕುಟುಂಬಸ್ಥರು ಕೂಡ ವಿದ್ವತ್‌ಗೆ ಮಾತನಾಡಲು ಆಗುತ್ತಿಲ್ಲ. ವೈದ್ಯರ ಬಳಿ ಚರ್ಚಿಸಿ ಎಂದು ಹೇಳಿ ಕಳುಹಿಸಿದ್ದಾರೆ. ವೈದ್ಯ ಆನಂದ್ ಅವರ ಬಳಿಗೆ ತನಿಖಾಧಿಕಾರಿಗಳು ತೆರಳಿದ್ದಾರೆ. ‘ವಿದ್ವತ್ ಅವರ ಆರೋಗ್ಯ ಚೇತರಿಸಿದ್ದು, ಆಹಾರ ಸೇವಿಸುತ್ತಿದ್ದಾರೆ.

ಆದರೆ ತುಟಿ ಮತ್ತು ಹಲ್ಲಿಗೆ ಪೆಟ್ಟು ಬಿದ್ದ ಕಾರಣ ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ಆತ ಇನ್ನಷ್ಟು ಚೇತರಿಸಿಕೊಂಡ ಬಳಿಕ ಹೇಳಿಕೆ ಪಡೆಯಿರಿ’ ಎಂದು ಡಾ| ಆನಂದ್ ಹೇಳಿದ್ದಾರೆ. ಹೀಗಾಗಿ ಹೇಳಿಕೆ ದಾಖಲಿಸಿಕೊಳ್ಳಲು ಆಗಲಿಲ್ಲ ಎಂದು ತನಿಖಾಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಆರೋಪಿ ಕೃಷ್ಣನ ಸುಳಿವು ಪತ್ತೆ: ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಪ್ರಕರಣದ ಮೂರನೇ ಆರೋಪಿ ಕೃಷ್ಣನ ಬಗ್ಗೆ ಸುಳಿವು ಪತ್ತೆಯಾಗಿದೆ. ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ತನಿಖಾಧಿಕಾರಿ ಹೇಳಿದರು.

loader