ನವದೆಹಲಿ[ಜು.25]: ನೂಡಲ್ಸ್‌ ಸೇವಿಸಿ ಅದು ಜೀರ್ಣವಾಗದೆ ಶಸ್ತ್ರಚಿಕಿತ್ಸೆ ಮಾಡಿ ಹೊರಗೆಯಲಾಯಿತು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ವೈದ್ಯರು ಆಪರೇಷನ್‌ ಮಾಡಿ ನೂಡಲ್ಸ್‌ನಂತೆ ಕಾಣುವ ವಸ್ತುವನ್ನು ಹೊರ ತೆಗೆಯುತ್ತಿರುವ ದೃಶ್ಯವಿದೆ.

ಅದರೊಂದಿಗೆ ‘ಅಪೋಲೋ ಆಸ್ಪತ್ರೆಯಲ್ಲಿ ಡಾ.ಹರೀಶ್‌ ಶುಕ್ಲಾ ಅವರು ಮಾಡಿದ ಆಪರೇಶನ್‌ ವಿಡಿಯೋ ಇದು. ನೂಡಲ್ಸ್‌ ನಮ್ಮ ದೇಹದಲ್ಲಿ ಜೀರ್ಣವಾಗುವುದಿಲ್ಲ. ಹಾಗಾಗಿ ಶಸ್ತ್ರಚಿಕಿತ್ಸೆ ಮೂಲಕ ನೂಡಲ್ಸನ್ನು ಹೊರತೆಗೆಯಲಾಯಿತು. ಆದ್ದರಿಂದ ನೂಡಲ್ಸ್‌ನಿಂದ ಮಕ್ಕಳನ್ನು ದೂರವಿಡಿ’ ಎಂದು ಒಕ್ಕಣೆ ಬರೆಯಲಾಗಿದೆ. ಇದೀಗ ವೈರಲ್‌ ಆಗಿದೆ.

ಈ ಸುದ್ದಿಯ ನೈಜತೆ ಪತ್ತೆಹಚ್ಚಲು ಆಲ್ಟ್‌ನ್ಯೂಸ್‌ ಸುದ್ದಿಸಂಸ್ಥೆಯು ಗೂಗಲ್‌ ರಿವರ್ಸ್ಸ್ ಇಮೇಜ್‌ನಲ್ಲಿ ಪರಿಶೀಲಿನೆ ನಡೆಸಿದ್ದು, ಆಗ ಇದಕ್ಕೆ ಸಂಬಂಧಪಟ್ಟಹಳೆಯ ವಿಡಿಯೋ ಇಂಟರ್‌ನೆಟ್‌ನಲ್ಲಿ ಪತ್ತೆಯಾಗಿದೆ. 2015 ಆಗಸ್ಟ್‌ 24ರಂದು ಡಾ.ಪರೇಶ್‌ ರುಪಾರೆಲ್‌ ಎಂಬುವವರು ಇದನ್ನು ಯುಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಅದರೊಂದಿಗೆ ‘ಸಣ್ಣ ಕರುಳಿನಲ್ಲಿದ್ದ ಜಂತುಹುಳುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಯಿತು’ ಎಂದು ವಿವರಣೆ ಬರೆದಿದ್ದಾರೆ.

ಆಲ್ಟ್‌ನ್ಯೂಸ್‌ ಡಾ.ಪರೇಶ್‌ ರುಪಾರೆಲ್‌ ಅವರ ಬಳಿ ಈ ಬಗ್ಗೆ ಸ್ಪಷ್ಟನೆ ಪಡೆದಾಗಲೂ ಅವರು ‘ಇದು ಜಂತು ಹುಳು. ನೂಡಲ್ಸ್‌ ಅಲ್ಲ’ ಎಂದು ಹೇಳಿದ್ದಾರೆ. ಅಲ್ಲಿಗೆ ನೂಡಲ್ಸ್‌ ತಿಂದು ಜೀರ್ಣವಾಗದೆ ಆಪರೇಷನ್‌ ಮಾಡಿ ತೆಗೆಯಲಾಯಿತು ಎಂಬ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.