ನವದೆಹಲಿ[ಫೆ.07]: ರಾಮಮಂದಿರ ಹೋರಾಟವನ್ನು 4 ತಿಂಗಳ ಕಾಲ ಸ್ಥಗಿತಗೊಳಿಸಲು ವಿಶ್ವ ಹಿಂದೂ ಪರಿಷತ್ತು (ವಿಎಚ್‌ಪಿ) ಅಚ್ಚರಿಯ ನಿರ್ಣಯ ಕೈಗೊಂಡಿದೆ. ಈಗ ಆಂದೋಲನ ಕೈಗೊಂಡರೆ ಅದು ಬಿಜೆಪಿಯೇತರ ಪಕ್ಷಗಳಿಗೆ ಲಾಭವಾಗಬಹುದು ಎಂಬ ಆತಂಕದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

‘ಇಲ್ಲಿಯವರೆಗೆ ಸರ್ಕಾರದ ಇದೇ ಕಾಲಾವಧಿಯಲ್ಲಿ ಮಂದಿರ ನಿರ್ಮಾಣವಾಗಬೇಕು. ಸುಪ್ರೀಂ ಕೋರ್ಟ್‌ ನಿರ್ಣಯಿಸದೇ ವಿಳಂಬ ಮಾಡುತ್ತಲೇ ಹೋದರೆ ಸುಗ್ರೀವಾಜ್ಞೆ ಹೊರಡಿಸಬೇಕು’ ಎಂದೆಲ್ಲ ವಿಎಚ್‌ಪಿ ಹಾಗೂ ಸಂಘ ಪರಿವಾರದ ಮುಖಂಡರು ಒತ್ತಾಯಿಸುತ್ತಿದ್ದರು. ಆದರೆ ಇತ್ತೀಚೆಗೆ ನಡೆದ ಧರ್ಮಸಂಸತ್ತಿನಲ್ಲಿ ತನ್ನ ನಿರ್ಣಯವನ್ನು ವಿಎಚ್‌ಪಿ ಬದಲಿಸಿದ್ದು, ಲೋಕಸಭೆ ಚುನಾವಣೆ ಮುಗಿಯುವವರೆಗೆ ಈ ವಿಷಯದ ಬಗ್ಗೆ ಯಾವುದೇ ಆಂದೋಲನ ನಡೆಸದೇ ಇರಲು ತೀರ್ಮಾನಿಸಲಾಗಿದೆ.

ಮಾಧ್ಯಮವೊಂದಕ್ಕೆ ಮಂಗಳವಾರ ಈ ವಿಷಯ ತಿಳಿಸಿದ ವಿಶ್ವ ಹಿಂದೂ ಪರಿಷತ್‌ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌, ‘4 ತಿಂಗಳು ನಾವು ಹೋರಾಟ ನಡೆಸುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ನಾವು ಆಂದೋಲನಕ್ಕೆ ಇಳಿದರೆ ಅದು ಕ್ಷುಲ್ಲಕ ಚುನಾವಣಾ ವಿಷಯವಾಗಿಬಿಡುತ್ತದೆ. ಹೀಗಾಗಿ ಈ ವಿಷಯವನ್ನು ಚುನಾವಣೆ ಮುಗಿಯುವವರೆಗೆ ರಾಜಕೀಯಕರಣಗೊಳಿಸದೇ ಇರಲು ನಾವು ನಿರ್ಧರಿಸಿದ್ದೇವೆ’ ಎಂದರು.

‘ನಾವು ಕೋರ್ಟ್‌ ಆದೇಶವನ್ನು ಸ್ವಾಗತಿಸುತ್ತೇವೆ. ಅಂಥ ತುರ್ತು ಸಂದರ್ಭ ಬಂದರೆ ಸಂತರ ಸಲಹೆ ಪಡೆಯುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನು ಅಯೋಧ್ಯೆಯ ವಿವಾದರಹಿತ ಜಮೀನನ್ನು ಮೂಲ ಮಾಲೀಕರಿಗೆ ಮರಳಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿ ಸ್ವಾಗತಾರ್ಹ ಎಂದ ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌, ‘ಈಗ ಪ್ರತಿಭಟನೆಯನ್ನು ನಾವು ಹಮ್ಮಿಕೊಂಡರೆ ಅದು ನಿರ್ದಿಷ್ಟರಾಜಕೀಯ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಪ್ರತಿಭಟನೆಯಾಗಿದೆ ಎಂದು ಜನ ಭಾವಿಸುತ್ತಾರೆ. ಈ ಪವಿತ್ರ ಆಂದೋಲನವನ್ನು ನಾವು ರಾಜಕೀಯಕರಣಗೊಳಿಸುವುದಿಲ್ಲ’ ಎಂದು ಹೇಳಿದರು.

4 ತಿಂಗಳ ಬಳಿಕ ಪರಿಸ್ಥಿತಿಯನ್ನು ಪುನರಾವಲೋಕನ ಮಾಡುತ್ತೇವೆ. ಆಗಲೂ ನಾವು ಪ್ರತಿಭಟನೆಗೆ ಇಳಿಯದೇ ಸಾಮೂಹಿಕ ಜಾಗೃತಿ ಮೂಡಿಸಲು ಹಾಗೂ ಒಮ್ಮತ ತರಲು ಯತ್ನಿಸ್ತುತೇವೆ ಎಂದರು.