ಸಾಂದರ್ಭಿಕ ಚಿತ್ರ

ಹೈದರಾಬಾದ್(ಸೆ.14): ಅಸಮಾನತೆ ಕೇವಲ ಮಾನವ ಪ್ರಪಂಚದಲ್ಲಿ ಮಾತ್ರವಲ್ಲ, ಪ್ರಾಣಿ ಪ್ರಪಂಚದಲ್ಲೂ ಇದೆ. ಅದೃಷ್ಟದ ಪ್ರಾಣಿ, ದುರದೃಷ್ಟದ ಪ್ರಾಣಿ ಅಂತಾ ಪ್ರಾಣಿ ಪ್ರಪಂಚದಲ್ಲೂ ವರ್ಗ ಸಂಘರ್ಷ ನಡೆಯುತ್ತಿದೆ . 

ದುರದೃಷ್ಟವಶಾತ ಈ ಅಸಮಾನತೆಯನ್ನು ಪ್ರಾಣಿಗಳಲ್ಲ, ಬದಲಿಗೆ ಮನುಷ್ಯನೇ ಅವುಗಳ ಅನುಮತಿ ಇಲ್ಲದೇ ಸೃಷ್ಟಿಸಿದ್ದಾನೆ. ಇದೇ ಕಾರಣಕ್ಕೆ ಕೆಲವಕ್ಕೆ ಸಾಕು ಪ್ರಾಣಿ ಪಟ್ಟ ಲಭಿಸಿದರೆ, ಇನ್ನೂ ಕೆಲವಕ್ಕೆ ಬೀದಿ ಪ್ರಾಣಿ ಪಟ್ಟ ಲಭಿಸಿದೆ.

ಅದರಲ್ಲೂ ನಾಯಿಗಳಲ್ಲಿ ಈ ಅಂತರ ತುಸು ಹೆಚ್ಚೇ ಎಂದು ಹೇಳಬೇಕು. ಸಾಕು ನಾಯಿಗಳಿಗೆ ಸಿಗುವ ರಾಜ ಮರ್ಯಾದೆ ಬೀದಿ ನಾಯಿಗಳಿಗೆಲ್ಲಿ ಹೇಳಿ?.

ಬೀದಿ ನಾಯಿಗಳು ಸತ್ತರೆ ಮುನ್ಸಿಪಾಲಿಟಿಗೆ ಕರೆ ಮಾಡಿ ಕರೆದು ಕರೆದು ಸುಸ್ತಾದರೂ, ಹೆಣ ತೆಗೆದುಕೊಂಡು ಹೋಗಲು ಅವರೇನೂ ಬರಲ್ಲ. ಆದರೆ ಅದೇ ಪ್ರತಿಷ್ಠಿತ ವ್ಯಕ್ತಿಗಳ ಪ್ರತಿಷ್ಠಿತ ನಾಯಿಗಳು ಸತ್ತರೆ ಅವುಗಳ ಸಾವಿಗೆ ತನಿಖೆ ಕೂಡ ಮಾಡಲಾಗುತ್ತದೆ.

ಹೌದು, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿದ್ದ ಸಾಕುನಾಯಿ ಅಕಾಲಿಕ ನಿಧನ ಹೊಂದಿದೆ. ಈ ಕಾರಣಕ್ಕೆ ನಾಯಿಗೆ ಚಿಕಿತ್ಸೆ ನೀಡಿದ್ದ ಪಶು ವೈದ್ಯನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಕಳೆದ ಸೆ.11ರಂದು ಪ್ರಗತಿ ಭವನದ ಸಾಕು ನಾಯಿ ‘ಹಸ್ಕಿ’ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಕೂಡಲೇ ಬಂಜಾರಾ ಹಿಲ್ಸ್’ನಲ್ಲಿರುವ ಪಶು ವೈದ್ಯ ರಂಜಿತ್ ಪ್ರಗತಿ ಭವನಕ್ಕೆ ಆಗಮಿಸಿ ಹಸ್ಕಿ ಆರೋಗ್ಯ ತಪಾಸಣೆ ನಡೆಸಿದ್ದರು. ಅಲ್ಲದೇ ಹಸ್ಕಿಗೆ ವೈದ್ಯ ರಂಜಿತ್ ಇಂಜೆಕ್ಷನ್ ಕೂಡ ನೀಡಿದ್ದರು.

ಇದಾದ ಕೆಲ ಸಮಯದ ಬಳಿಕ ಹಸ್ಕಿ ಮೃತಪಟ್ಟಿದ್ದು, ನಿರ್ಲ್ಯಕ್ಷದ  ಆರೋಪದ ಮೇಲೆ ಪಶುವೈದ್ಯ ರಂಜಿತ್ ವಿರುದ್ಧ ಇದೀಗ ಪೊಲೀಸರು FIR ದಾಖಲಿಸಿದ್ದಾರೆ.