ರಾಷ್ಟ್ರಾದ್ಯಂತ ಕಳೆದ ಕೆಲವು ವರ್ಷಗಳಿಂದ ಭಾರಿ ಸುದ್ದಿಯಲ್ಲಿದ್ದ ತ್ರಿವಳಿ ತಲಾಕ್ ಕುರಿತು ಇಂದು ಮಹತ್ತರವಾದ ತೀರ್ಮಾನ ಹೊರಬೀಳಲಿದೆ. ಲಿಂಗಸಮಾನತೆ ನೀಡಬೇಕೆಂದು ಎಂದು ಬಹುದಿನಗಳಿಂದ ಕೇಳಿ ಬರುತ್ತಿದ್ದ ಕೂಗಿಗೆ ಇಂದು ಸುಪ್ರೀಂ ಕೊರ್ಟ್ನಿಂದ ತೀರ್ಪು ಹೊರಬರಲಿದೆ.
ನವದೆಹಲಿ(ಆ.22): ದೇಶದಲ್ಲಿ ಇಂದು ಮಹತ್ವದ ತೀರ್ಪೊಂದು ಹೊರ ಬೀಳುತ್ತಿದೆ. ಬಹು ಚರ್ಚಿತ ತ್ರಿವಳಿ ತಲಾಖ್ ನಿರ್ಣಯದ ದಿನ. 6 ದಿನಗಳ ಮ್ಯಾರಥಾನ್ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಮೇ 19ರಂದು ತೀರ್ಪನ್ನ ಆಗಸ್ಟ್ 22ಕ್ಕೆ ಕಾಯ್ದಿರಿಸಿತ್ತು. ತ್ರಿವಳಿ ತಲಾಖ್ ಮತ್ತು ಮುಸ್ಲಿಂ ಮಹಿಳೆಯರ ಹಕ್ಕು ಕುರಿತಾದ ಸಾಲು ಸಾಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ತ್ರಿವಳಿ ತಲಾಖ್ ಸಾಂವಿಧಾನಿಕ ಮಾನ್ಯತೆ ಕುರಿತಂತೆ ತೀರ್ಮಾನ ಕೈಗೊಳ್ಳಲು ಸಂವಿಧಾನ ಪೀಠವನ್ನ ರಚಿಸಲಾಗಿತ್ತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ಜಸ್ಟೀಸ್ ಕುರಿಯನ್ ಜೋಸೆಫ್, ಜಸ್ಟೀಸ್ ರೋಹಿಂಟನ್ ಫಾಲಿ ನಾರಿಮನ್, ಜಸ್ಟೀಸ್ ಉದಯ್ ಉಮೇಶ್ ಲಲಿತ್ ಮತ್ತು ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ಸಂವಿಧಾನ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ.
ಕೊನೆಯ ವಾದದ ದಿನದಂದು ಸುಪ್ರೀಂಕೋರ್ಟ್ ಮುಂದೆ ಪ್ರಮಾಣಪತ್ರ ಸಲ್ಲಿಸಿದ್ದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ನಿಖಾಗೆ ಒಪ್ಪಿಗೆ ನೀಡುವ ಮುನ್ನವೇ ತ್ರಿವಳಿ ತಲಾಖ್ ಆಯ್ಕೆಯನ್ನ ಹೊರಗಿಡುವ ಅಧಿಕಾರವನ್ನ ಮಹಿಳೆಯರಿಗೆ ನೀಡಲು ಖಾಸಿಗಳಿಗೆ ಸಲಹೆ ನೀಡಲಾಗುವುದೆಂದು ತಿಳಿಸಿತ್ತು. ಸುಪ್ರೀಂ ನ ಪಂಚಸದಸ್ಯ ಪೀಠದಿಂದ ಇಂದು 10.30ಕ್ಕೆ ಮಹತ್ತರ ತೀರ್ಪು ಹೊರಬೀಳಲಿದೆ.
ಲಿಂಗಸಮಾನತೆ ನೀಡಬೇಕೆಂದು ಅಹವಾಲಿಟ್ಟಿದ್ದ ಮುಸಲ್ಮಾನ್ ಮಹಿಳೆಯರ ಮೇಲೆ ಈ ತೀರ್ಪು ಭಾರೀ ಪರಿಣಾಮ ಬೀರಲಿದೆ. 2015 ರ ಅಕ್ಟೋಬರ್ 16 ರಂದು ಆರಂಭಬಾದ ತ್ರಿವಳಿ ತಲಾಖ್ ವಿವಾದಕ್ಕೆ ಇಂದು ಅಂತಿಮ ತೆರೆ ಬೀಳಲಿದೆ.
ಈಗಾಗಲೇ ವಿಚಾರಣೆ ವೇಳೆ ತ್ರಿವಳಿ ತಲಾಖ್ ಪದ್ಧತಿ ಮುಸ್ಲೀಂರಲ್ಲಿ ಮದುವೆಯನ್ನ ಅನೂರ್ಜಿತಗೊಳಿಸುವ ಅತ್ಯಂತ ಹೀನ ಮತ್ತು ಅನಪೆಕ್ಷೀತ ಪದ್ಧತಿ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಇನ್ನೂ ಅಲಹಬಾದ್ ಹೈಕೋರ್ಟ್ ಕೂಡ ಇದೊಂದು ಅತ್ಯಂತ ಕ್ರೂರ ವ್ಯವಸ್ಥೆ ಎಂದಿತ್ತು ಹೀಗಾಗಿ ಸುಪ್ರೀಂ ತೀರ್ಪಿನತ್ತ ಇಡೀ ದೇಶದ ಚಿತ್ತ ನೆಟ್ಟಿದೆ.
