Asianet Suvarna News Asianet Suvarna News

ಮಾತೆ ವಿರುದ್ಧ ದಾವೆಗೆ ವೀರಶೈವ ಮಹಾಸಭಾ ನಿರ್ಧಾರ

12 ನೇ ಶತಮಾನದ ವಚನಕಾರ ಬಸವಣ್ಣನವರ ವಚನದ ‘ಕೂಡಲಸಂಗಮ ದೇವ’ ಅಂಕಿತ ನಾಮವನ್ನು ಲಿಂಗದೇವ ಎಂದು ಬದಲಾವಣೆಗೆ ನ್ಯಾಯಾಲಯದ ಅಸಮ್ಮತಿಯಿದ್ದರೂ ಮಾತೆ ಮಹಾದೇವಿ ಬಸವ ವಚನಾಮೃತ 10 ಸರಣಿ ಮಾಲಿಕೆಯಲ್ಲಿ ಮತ್ತೆ ಲಿಂಗದೇವ ನಾಮಾಂಕಿತ ಬಳಸಿರುವುದರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಅಖಿಲ ಭಾರತ ವೀರಶೈವ ಮಹಾಸಭಾ ನಿರ್ಧರಿಸಿದೆ.

Veerashaiva Mahasabha to take Legal Action Against Mate Mahadevi

ಬೆಂಗಳೂರು: 12 ನೇ ಶತಮಾನದ ವಚನಕಾರ ಬಸವಣ್ಣನವರ ವಚನದ ‘ಕೂಡಲಸಂಗಮ ದೇವ’ ಅಂಕಿತ ನಾಮವನ್ನು ಲಿಂಗದೇವ ಎಂದು ಬದಲಾವಣೆಗೆ ನ್ಯಾಯಾಲಯದ ಅಸಮ್ಮತಿಯಿದ್ದರೂ ಮಾತೆ ಮಹಾದೇವಿ ಬಸವ ವಚನಾಮೃತ 10 ಸರಣಿ ಮಾಲಿಕೆಯಲ್ಲಿ ಮತ್ತೆ ಲಿಂಗದೇವ ನಾಮಾಂಕಿತ ಬಳಸಿರುವುದರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಅಖಿಲ ಭಾರತ ವೀರಶೈವ ಮಹಾಸಭಾ ನಿರ್ಧರಿಸಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೀರಶೈವ ಮಹಾಸಭಾ ಉಪಾಧ್ಯಕ್ಷ ಬಿ.ಎಸ್. ಸಚ್ಚಿದಾನಂದ ಮೂರ್ತಿ ಈ ವಿಷಯ ತಿಳಿಸಿದರು.

ವೀರಶೈವ ಮಹಾಸಭಾ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಕೂಡಲಸಂಗಮ ಅಂಕಿತ ನಾಮವನ್ನು ಲಿಂಗದೇವ ಎಂದು ಮುದ್ರಿಸಿರುವ ‘ಬಸವ ವಚನ ದೀಪ್ತಿ’ ಎಂಬ ಕೃತಿಯನ್ನು 1998ರಲ್ಲಿ ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು.

ಅದರ ವಿರುದ್ಧ ಮಾತೆ ಮಹಾದೇವಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಕೂಡ 2003ರಲ್ಲೇ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು. ಬುಧವಾರವಷ್ಟೇ ಸುಪ್ರಿಂಕೋರ್ಟ್ ಕೂಡ ಹೈಕೋರ್ಟ್ ಆದೇಶ ಎತ್ತಿ ಹಿಡಿದಿದೆ. ಆದರೆ 2003ರಿಂದ ಈವರೆಗೆ ‘ಬಸವ ವಚನಾಮೃತ’ ಎಂಬ 10 ಸರಣಿ ಮಾಲಿಕೆಗಳಲ್ಲಿ ಬಸವಣ್ಣನವರ ವಚನಗಳನ್ನು ಅಂಕಿತ ನಾಮ ಬದಲಿಸಿ ಬಳಸಲಾಗಿದೆ ಎಂದು ಆರೋಪಿಸಿದರು.

ಕೃತಿ ವಿಕೃತಿ: ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಂಡು ಬಸವಣ್ಣನವರ ವಚನಗಳ ಕೃತಿಚೌರ್ಯ ಮತ್ತು ವಿಕೃತಿಗೊಳಿಸುವ ಕೃತ್ಯದಲ್ಲಿ ತೊಡಗಿರುವ ಮಾತೆ ಮಹಾದೇವಿ ವಿರುದ್ಧ ವೀರಶೈವ ಮಹಾಸಭಾ ಎರಡು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದೆ. ಸ್ವಯಂಘೋಷಿತ ಜಗದ್ಗುರು ಆಗಿರುವ ಅವರು ಯಾವುದೇ ವೀರಶೈವ ಲಿಂಗಾಯತ ತತ್ವ ಸಿದ್ಧಾಂತಗಳನ್ನು ಅನುಸರಿಸುತ್ತಿಲ್ಲ. ಅನ್ನ ದಾಸೋಹ, ಜ್ಞಾನ ದಾಸೋಹಗಳನ್ನು ನಡೆಸುತ್ತಿಲ್ಲ. ಬದಲಾಗಿ ಬೆಂಗಳೂರು ಹೊರವಲಯದ ಕುಂಬಳಗೋಡು ಬಳಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದಾರೆ. ಇಂತಹ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಈಗ ಅನಿವಾರ್ಯವಾಗಿದೆ ಎಂದು ಹೇಳಿದರು.

ಮಹಾದೇವಿ ಅವರು ವಿವಿಧ ಕೃತಿಗಳಲ್ಲಿ ನಾಮಾಂಕಿತ ತಿರುಚುತ್ತಿರುವುದರಿಂದ ಅವರ ಎಲ್ಲ ಕೃತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕಲ್ಯಾಣ ಕಿರಣ ಮಾಸಿಕ ಪತ್ರಿಕೆಯನ್ನು ನಿರ್ಬಂಧಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. ಮಹಾಸಭಾ ಪದಾಧಿಕಾರಿಗಳಾದ ರೇಣುಕ ಪ್ರಸನ್ನ, ಗುರುಬಸಪ್ಪ, ಜಯಲಿಂಗಪ್ಪ, ಧನಂಜಯ ನಟರಾಜ್ ಮತ್ತಿತರರಿದ್ದರು.

 

Follow Us:
Download App:
  • android
  • ios