ಹೈದರಾಬಾದ್‌[ಜೂ.08]: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ವಿವಿಧ ರಾಜ್ಯಗಳ ಕಾಂಗ್ರೆಸ ಘಟಕಗಳಲ್ಲಿ ಬಂಡಾಯದ ಬೆಂಕಿ ಭುಗಿಲೆದ್ದಿರುವಾಗ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಾಷ್ಟಾ್ರಧ್ಯಕ್ಷ ಹುದ್ದೆ ತೊರೆಯುವುದು ಸರಿಯಲ್ಲ ಎಂದು ಪಕ್ಷದ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ. ಅಲ್ಲದೆ ಒಂದು ವೇಳೆ ರಾಜೀನಾಮೆ ನೀಡುವುದೇ ಆದಲ್ಲಿ ಪರಾರ‍ಯಯ ವ್ಯವಸ್ಥೆ ಮಾಡುವವರೆಗೂ ರಾಹುಲ್‌ ಹುದ್ದೆಯಲ್ಲಿ ಮುಂದುವರೆಯಬೇಕು ಎಂದು ಒತ್ತಾಯಿಸಿದ್ದಾರೆ.

ಪಂಜಾಬ್‌, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣದ ಕಾಂಗ್ರೆಸ್‌ ಘಟಕದಲ್ಲಿನ ಬಂಡಾಯದ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ವೀರಪ್ಪ ಮೊಯ್ಲಿ, ‘ನಾಯಕತ್ವ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇದ್ದಾಗ, ಇಂಥ ಸಂಗತಿಗಳು ನಡೆಯುತ್ತವೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಹಿನ್ನಡೆಯಿಂದ ಕಾಂಗ್ರೆಸ್‌ ನಿರಾಶೆಗೊಳ್ಳಬಾರದು. ಮುಂದಿನ ದಿನಗಳಲ್ಲಿ ಖಂಡಿತಾ ಪಕ್ಷ ಪುಟಿದೇಳಲಿದೆ. ಇಂಥಾ ಒಂದು ಆಶಾವಾದ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಂದ ಹಿಡಿದು ಮೇಲಿನ ಹಂತದ ನಾಯಕರಲ್ಲಿ ಇರಬೇಕು. ಪಂಜಾಬ್‌, ರಾಜಸ್ಥಾನದಲ್ಲಿನ ಕಾಂಗ್ರೆಸ್‌ ಘಟಕಗಳಲ್ಲಿ ಬಂಡಾಯದ ಬೆಂಕಿ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಧ್ಯಪ್ರವೇಶಿಸಬೇಕು. ಭಿನ್ನಮತ ಶಮನಗೊಳಿಸಬೇಕು. ತಕ್ಷಣವೇ ರಾಜೀನಾಮೆ ಹಿಂಪಡೆಯಬೇಕು ಎಂದು ಸಲಹೆ ಮಾಡಿದ್ದಾರೆ.

ರಾಜೀನಾಮೆ ನೀಡಲು ರಾಹುಲ್‌ ಅವರಿಗೆ ಇದು ಸೂಕ್ತ ಸಮಯವಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಪರಾರ‍ಯಯ ವ್ಯವಸ್ಥೆ ಮಾಡುವವರೆಗೂ ರಾಹುಲ್‌ ಅವರು ಹುದ್ದೆ ತೊರೆಯಬಾರದು. ರಾಹುಲ್‌ ಅವರು ತಕ್ಷಣವೇ ರಾಜೀನಾಮೆ ಹಿಂಪಡೆಯಬೇಕು. ಅಧಿಕಾರ ವಹಿಸಿಕೊಂಡು, ಶಿಸ್ತು ಜಾರಿಗೊಳಿಸಿ, ಸಮಯ ವ್ಯರ್ಥ ಮಾಡದೇ ಪಕ್ಷ ಪುನಶ್ಚೇತನಗೊಳಿಸಬೇಕು. ವಿಶ್ವಾಸ, ಕೆಚ್ಚು ತುಂಬಬೇಕು ಎಂದು ತಿಳಿಸಿದ್ದಾರೆ.