ದೇಶದ ಒಬ್ಬ ಪ್ರಧಾನ ಮಂತ್ರಿ ಇಷ್ಟು ಕೆಳಮಟ್ಟಕ್ಕೆ ಇಳಿದು ಪ್ರಚಾರ ಮಾಡಿರುವುದು ನನ್ನ ಇಡೀ ರಾಜಕೀಯ ಜೀವನದಲ್ಲಿ ನೋಡಿಲ್ಲ. ಪ್ರಧಾನಿ ನರೇಂದ್ರ ಮೋದಿ ತುಂಬಾ ಹತಾಶರಾಗಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಡಾ. ಎಂ.ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.
ಬೆಂಗಳೂರು(ಡಿ.12): ದೇಶದ ಒಬ್ಬ ಪ್ರಧಾನ ಮಂತ್ರಿ ಇಷ್ಟು ಕೆಳಮಟ್ಟಕ್ಕೆ ಇಳಿದು ಪ್ರಚಾರ ಮಾಡಿರುವುದು ನನ್ನ ಇಡೀ ರಾಜಕೀಯ ಜೀವನದಲ್ಲಿ ನೋಡಿಲ್ಲ. ಪ್ರಧಾನಿ ನರೇಂದ್ರ ಮೋದಿ ತುಂಬಾ ಹತಾಶರಾಗಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಡಾ. ಎಂ.ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.
ಗುಜರಾತ್’ನ ಪ್ರತಿ ವಿಧಾನಸಭೆ ಕ್ಷೇತ್ರಕ್ಕೂ ಹೋಗಿ ನರೇಂದ್ರ ಮೋದಿ ಮಾತನಾಡುತ್ತಿದ್ದಾರೆ. ಮೋದಿಯ ವರ್ಚಸ್ಸು ಮೊದಲಿನಂತಿರದೇ ಭಾರಿ ಮಟ್ಟದಲ್ಲಿ ಕುಸಿದಿದೆ. ಹೀಗಾಗಿ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯಲು ಇನ್ನಿಲ್ಲದ ಸುಳ್ಳು ಹೇಳುತ್ತಿದ್ದಾರೆ.
ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ರಾಯಭಾರಿಗಳ ಜತೆ ಚರ್ಚೆ ನಡೆಸಿದ್ದು ಒಂದು ವರ್ಷದ ಹಿಂದೆ. ಇದೀಗ ಆ ವಿಷಯವನ್ನು ಬಳಸಿಕೊಂಡು ಮತ ಗಳಿಸಲು ಭಾವನಾತ್ಮಕವಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ಹುದ್ದೆಯಲ್ಲಿರುವವರು ಇಂತಹ ಕೆಳಮಟ್ಟಕ್ಕೆ ಇಳಿಯಬಾರದಿತ್ತು ಎಂದು ವೀರಪ್ಪ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮೋದಿ ಬಚ್ಚಾನಾ? ಸಿದ್ದು ಬಚ್ಚಾನಾ?: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಎದುರು ಸಿದ್ದರಾಮಯ್ಯ ಬಚ್ಚಾ ಎಂದು ಹೇಳಿದ್ದಾರೆ. ಅದೇ ರೀತಿ ಮೋದಿ ಅವರು, ನೆಹರೂ ಕುಟುಂಬ, ರಾಹುಲ್ ಗಾಂಧಿ ಹಾಗೂ ಮಣಿಶಂಕರ್ ಅಯ್ಯರ್ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ. ಆದರೆ ಯಡಿಯೂರಪ್ಪ ಇನ್ನೂ ನರೇಂದ್ರ ಮೋದಿ ಮಟ್ಟಕ್ಕೆ ಇಳಿದು ಮಾತನಾಡುತ್ತಿಲ್ಲ. ಶೀಘ್ರದಲ್ಲೇ ನರೇಂದ್ರ ಮೋದಿ ಬಚ್ಚಾನಾ ಅಥವಾ ಸಿದ್ದರಾಮಯ್ಯ ಬಚ್ಚಾನಾ ಎನ್ನುವುದು ಗೊತ್ತಾಗಲಿದೆ ಎಂದು ಟಾಂಗ್ ನೀಡಿದರು.
